ಧಾರವಾಡ: ಕಳೆದ 11 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಮಾರ್ಚ್ ತಿಂಗಳಲ್ಲಿ ಅನಿರೀಕ್ಷಿತವಾಗಿ ಆಲಿಕಲ್ಲು ಮಳೆ ಆಗಿದ್ದು, ಇದರಿಂದ ಕಲಘಟಗಿ, ಹುಬ್ಬಳ್ಳಿ, ನವಲಗುಂದ ತಾಲೂಕಿನಲ್ಲಿ ಜಾನುವಾರು, ಮನೆ ಮತ್ತು ಬೆಳೆ ಹಾನಿ ಆಗಿರುವ ವರದಿಯಾಗಿದೆ. ಸಂಬಂಧಿಸಿದ ತಾಲೂಕುಗಳ ಅಧಿಕಾರಿಗಳು ಪಾರದರ್ಶಕವಾಗಿ ಜಂಟಿ ಸಮೀಕ್ಷೆ ಮಾಡಿ, ವರದಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಡಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಖುದ್ದಾಗಿ ಎಲ್ಲಾ ತಾಲೂಕುಗಳ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ತುರ್ತು ಸಭೆ ಜರುಗಿಸಿ ಮಾತನಾಡಿದರು.
ಕಳೆದ 2015ರ ಮಾರ್ಚ್‌ನಲ್ಲಿ ಅನಿರೀಕ್ಷಿತ ಮಳೆಯಾಗಿತ್ತು. ಈಗ 11 ವರ್ಷಗಳ ನಂತರ ಮಾರ್ಚ್ ತಿಂಗಳಲ್ಲಿ ಮಳೆ ಆಗಿದೆ. ಆಲಿಕಲ್ಲು ಮಳೆಯಿಂದ ವಿಶೇಷವಾಗಿ ಕಲಘಟಗಿ ತಾಲೂಕಿನ ಮಾಚಾಪುರ ಗ್ರಾಮ ಸುತ್ತಮುತ್ತ ಸುಮಾರು 5 ರಿಂದ 8 ಕಿ.ಮೀ ವ್ಯಾಪ್ತಿಯಲ್ಲಿ ಮನೆ, ಜಾನುವಾರ ಮತ್ತು ಬೆಳೆ ಹಾನಿ ಆಗಿರುವ ವರದಿಯಾಗಿದೆ. ಈಗಾಗಲೇ ಸ್ಥಳೀಯ ಅಧಿಕಾರಿಗಳಿಗೆ ನೀಡಿದ ಸೂಚನೆಯಂತೆ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳು ಹಾನಿ ಪ್ರದೇಶ ಅಂದಾಜಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
ಬೆಳೆ ಹಾನಿ ಹಾಗೂ ಮನೆ ಹಾನಿ ಕುರಿತು ಕಂದಾಯ, ಕೃಷಿ, ತೋಟಗಾರಿಕೆ, ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ಕೈಗೊಳ್ಳಬೇಕು. ರೈತರಿಂದ ಅಥವಾ ಫಲಾನುಭವಿಗಳಿಂದ ಯಾವುದೇ ರೀತಿಯಲ್ಲಿ ದೂರು ಬರದಂತೆ ಎಚ್ಚರಿಕೆಯಿಂದ, ಪಾರದರ್ಶಕವಾಗಿ ಸಮೀಕ್ಷೆ ಕೈಗೊಳ್ಳಬೇಕೆಂದು ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಕಲಘಟಗಿಯಲ್ಲಿ ಅಂದಾಜು 205 ಎಕರೆ ಮಾವು ಸೇರಿದಂತೆ ಸುಮಾರು 450 ಎಕರೆ ಪ್ರದೇಶದಲ್ಲಿ ಮಾವು, ಬಾಳೆ, ತರಕಾರಿ ಬೆಳೆಗಳಿಗೆ ಹಾನಿ ಆಗಿದೆ ಎಂದು ಕಲಘಟಗಿ ತಹಸೀಲ್ದಾರ್ ಮಾಹಿತಿ ನೀಡಿದ್ದಾರೆ. ಆದಷ್ಟು ಬೇಗ ಜಂಟಿ ಸಮೀಕ್ಷೆ ಮಾಡಿ, ನಿಖರವಾದ ವರದಿ ಸಲ್ಲಿಸಬೇಕು. ಹವಾಮಾನ ಆಧಾರಿತ ಬೆಳೆ ವಿಮೆ ಮಾಡಿರುವ ರೈತರಿಗೆ ಪರಿಹಾರ ದೊರಕುವಂತೆ ಮಾಡಲು ವಿಮಾ ಕಂಪನಿ ಪ್ರತಿನಿಧಿಗಳಿಗೆ ಸೂಚನೆ ನೀಡಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಮಾರ್ಚ್ 20 ಮತ್ತು 21 ರಂದು ಸಹ ಜಿಲ್ಲೆಯಲ್ಲಿ ಮಳೆ, ಗುಡುಗು, ಸಿಡಿಲು, ಮಿಂಚು ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಎಲ್ಲ ಹಂತದ ಅಧಿಕಾರಿಗಳು ಈ ಕುರಿತು ಮುನ್ನೆಚ್ಚರಿಕೆ ವಹಿಸಬೇಕೆಂದು ಅವರು ತಿಳಿಸಿದರು.
ತಾವೇ ಸ್ವತಃ ರ‍್ಯಾಡಮ್ ಆಗಿ ಅಧಿಕಾರಿಗಳಿಗೆ ಅನಿರೀಕ್ಷಿತ ಮೊಬೈಲ್ ಕರೆ ಮಾಡಿ, ಪರೀಕ್ಷಿಸುತ್ತೇನೆ. ಕರೆ ಸ್ವೀಕರಿಸದಿದ್ದಲ್ಲಿ ಅಥವಾ ಸ್ವಿಚ್ ಆಫ್ ಇದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಅಧಿಕಾರಿಗಳಿಗೆ ಎಚ್ಚರಿಸಿದ್ದರು.






















