Home Advertisement
Home ನಮ್ಮ ಜಿಲ್ಲೆ ದಾವಣಗೆರೆ ದಾವಣಗೆರೆ : ಪಾಂಡವರಂತೆ ಗೆಲ್ಲುತ್ತೇವೆ ಎಂದ ದಾಸಕರಿಯಪ್ಪ

ದಾವಣಗೆರೆ : ಪಾಂಡವರಂತೆ ಗೆಲ್ಲುತ್ತೇವೆ ಎಂದ ದಾಸಕರಿಯಪ್ಪ

0
109

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ರಾಜಕೀಯ ಚಟುವಟಿಕೆಗಳು ದಿನೇ ದಿನೇ ಚುರುಕುಗೊಳ್ಳುತ್ತಿದ್ದು, ಭಾರತೀಯ ಜನತಾ ಪಕ್ಷ (BJP) ಅಭ್ಯರ್ಥಿ ಶ್ರೀನಿವಾಸ್ ದಾಸ ಕರಿಯಪ್ಪ (Srinivas Dasakariyappa) ಅವರು ಇಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ ಮಾಡುವ ಮೂಲಕ ಚುನಾವಣಾ ಕಣಕ್ಕಿಳಿದಿದ್ದಾರೆ.

ಐದು ಮಂದಿ ಟಿಕೆಟ್ ಆಕಾಂಕ್ಷಿಗಳೊಂದಿಗೆ ಒಗ್ಗಟ್ಟಿನ ಸಂದೇಶ ನೀಡುತ್ತಾ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು, “ಪಕ್ಷದ ಎಲ್ಲಾ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಮತ್ತೊಮ್ಮೆ ಭರ್ಜರಿ ಮೆರವಣಿಗೆಯೊಂದಿಗೆ ಅಧಿಕೃತವಾಗಿ ನಾಮಪತ್ರ ಸಲ್ಲಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಟಿಕೆಟ್ ಘೋಷಣೆಗೂ ಮುನ್ನವೇ ನಾಮಪತ್ರ ಸಲ್ಲಿಸಿದ ಸಮರ್ಥ ಶಾಮನೂರು

‘ಈ ಬಾರಿ ಗೆಲುವು ಖಚಿತ’: ಮತದಾರರು ಈಗಾಗಲೇ ಸ್ವಯಂಪ್ರೇರಿತರಾಗಿ ಬಿಜೆಪಿ ಪರ ಒಲವು ತೋರಿಸುತ್ತಿದ್ದು, ಈ ಬಾರಿ ನಮ್ಮ ಗೆಲುವು ಖಚಿತ ಎಂದು ಶ್ರೀನಿವಾಸ್ ದಾಸಕರಿಯಪ್ಪ ವಿಶ್ವಾಸ ವ್ಯಕ್ತಪಡಿಸಿದರು.

‘ಮಹಾಭಾರತ ಯುದ್ಧದಂತಿದೆ ಚುನಾವಣೆ’: ಚುನಾವಣೆಯನ್ನು ಮಹಾಭಾರತ ಯುದ್ಧಕ್ಕೆ ಹೋಲಿಸಿದ ಅವರು, “ನಾವು ಐದು ಮಂದಿ ಪಾಂಡವರಂತೆ ಒಗ್ಗಟ್ಟಾಗಿ ಹೋರಾಡಿ ಗೆಲ್ಲುತ್ತೇವೆ” ಎಂದು ಹೇಳಿ, ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ಕರೆದೊಯ್ಯುವ ಭರವಸೆ ನೀಡಿದ್ದಾರೆ.

ಕಾಂಗ್ರೆಸ್‌ನಲ್ಲಿ ಟಿಕೆಟ್ ಗೊಂದಲ: ಇನ್ನೊಂದೆಡೆ, ಕಾಂಗ್ರೆಸ್ ಪಾಳಯದಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಗೊಂದಲ ಮುಂದುವರೆದಿದೆ. ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಪುತ್ರ ಸಮರ್ಥ್​ ಶಾಮನೂರು (Samartha Shamanur) ಅವರು ಟಿಕೆಟ್ ಘೋಷಣೆಗೆ ಮುನ್ನವೇ ನಾಮಪತ್ರ ಸಲ್ಲಿಸಿದ್ದು, ಪಕ್ಷದೊಳಗಿನ ಚರ್ಚೆಗೆ ಕಾರಣವಾಗಿದೆ.

ಅಲ್ಪಸಂಖ್ಯಾತರು ಹಾಗೂ ಅಹಿಂದ ಸಮುದಾಯದ ಕೆಲವು ನಾಯಕರು ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಒತ್ತಾಯಿಸುತ್ತಿರುವುದು, ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸಿದೆ.

ರಾಜಕೀಯ ಕಾವು ಏರಿಕೆ: ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕಠಿಣ ಪೈಪೋಟಿ ಎದುರಾಗುವ ಸಾಧ್ಯತೆ ಇದ್ದು, ಮುಂದಿನ ದಿನಗಳಲ್ಲಿ ರಾಜಕೀಯ ಚಟುವಟಿಕೆಗಳು ಇನ್ನಷ್ಟು ತೀವ್ರಗೊಳ್ಳುವ ನಿರೀಕ್ಷೆಯಿದೆ.