ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆಯ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಜೋರಾಗಿವೆ. ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ನಿರ್ಮಾಣವಾಗಿದೆ.
ಕಾಂಗ್ರೆಸ್‌ನಲ್ಲಿ ಟಿಕೆಟ್ ಘೋಷಣೆಗೂ ಮುನ್ನವೇ ಮಹತ್ವದ ಬೆಳವಣಿಗೆ ನಡೆದಿದ್ದು, ಸಚಿವ ಎಸ್.ಎಸ್‌ಮಲ್ಲಿಕಾರ್ಜುನ್ ಪುತ್ರ ಸಮರ್ಥ್ ಶಾಮನೂರು ಶುಕ್ರವಾರ (ಮಾ.20) ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಅವರು ನಿಟ್ಟುವಳ್ಳಿ ದುರ್ಗಾಂಬಿಕಾ ದೇವಸ್ಥಾನ ಸೇರಿದಂತೆ ನಗರದ ಪ್ರಮುಖ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಈ ವೇಳೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಸಾಥ್ ನೀಡಿದರು.
ಟಿಕೆಟ್ ಘೋಷಣೆಯಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ, ಈ ಕ್ರಮವನ್ನು ಶಾಮನೂರು ಕುಟುಂಬದ ಎಚ್ಚರಿಕೆಯ ಹೆಜ್ಜೆ ಎಂದು ರಾಜಕೀಯ ವಲಯದಲ್ಲಿ ಚರ್ಚಿಸಲಾಗುತ್ತಿದೆ. ಸಮರ್ಥ್‌ಗೆ ಟಿಕೆಟ್ ಸಿಗಲೆಂದು ಅಭಿಮಾನಿಗಳು ಮಂತ್ರಾಲಯದಲ್ಲಿ ಪೂಜೆ ಸಲ್ಲಿಸಿರುವುದು ಕೂಡ ಗಮನಸೆಳೆದಿದೆ.
ಇದಕ್ಕೂ ಮಧ್ಯೆ, ಬಿಜೆಪಿ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯಾಗಿ ಶ್ರೀನಿವಾಸ ದಾಸಕರಿಯಪ್ಪ (Srinivas Dasakariyappa) ಅವರನ್ನು ಘೋಷಿಸಿದೆ. ಹಲವು ಆಕಾಂಕ್ಷಿಗಳ ನಡುವೆಯೂ ದಾಸಕರಿಯಪ್ಪ ಆಯ್ಕೆಯಾಗಿರುವುದು ಅಚ್ಚರಿ ನಿರ್ಧಾರವೆಂದು ಹೇಳಲಾಗುತ್ತಿದೆ. ಅವರು ಕಳೆದ ಒಂದು ದಶಕದಿಂದ ಪಕ್ಷದಲ್ಲಿ ಸಕ್ರಿಯರಾಗಿದ್ದು, ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಒಟ್ಟಾರೆ, ಕಾಂಗ್ರೆಸ್‌ನಲ್ಲಿ ಟಿಕೆಟ್ ಗೊಂದಲ ಮತ್ತು ಬಿಜೆಪಿ ಅಚ್ಚರಿ ಆಯ್ಕೆ ನಡುವಿನ ಈ ಬೆಳವಣಿಗೆಗಳಿಂದ ದಾವಣಗೆರೆ ದಕ್ಷಿಣ ಉಪಚುನಾವಣೆ ಹೈವೋಲ್ಟೇಜ್ ಕಣವಾಗಿ ಪರಿಣಮಿಸಿದೆ. ಎರಡೂ ಪಕ್ಷಗಳು ಗೆಲುವಿಗಾಗಿ ತೀವ್ರ ಸಿದ್ಧತೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜಕೀಯ ಚಟುವಟಿಕೆಗಳು ಮತ್ತಷ್ಟು ವೇಗ ಪಡೆಯುವ ಸಾಧ್ಯತೆ ಇದೆ.























