Home Advertisement
Home ಸುದ್ದಿ ದೇಶ ನೇಪಾಳ: ಮೃತದೇಹ ಸಾಗಿಸುತ್ತಿದ್ದ ಹೆಲಿಕಾಪ್ಟರ್ ಪತನ

ನೇಪಾಳ: ಮೃತದೇಹ ಸಾಗಿಸುತ್ತಿದ್ದ ಹೆಲಿಕಾಪ್ಟರ್ ಪತನ

0
97

ನೇಪಾಳ: ಕಾಠ್ಮಂಡುವಿನಿಂದ ಮೃತದೇಹವನ್ನು ಸಾಗಿಸುತ್ತಿದ್ದ ಖಾಸಗಿ ಹೆಲಿಕಾಪ್ಟರ್ ಒಂದು ಕೃಷಿ ಭೂಮಿಯಲ್ಲಿ ಇಳಿಯುವಾಗ ಪತನಗೊಂಡ ಘಟನೆ ನಡೆದಿದೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಇಂದು ಬೆಳಿಗ್ಗೆ ಸುಮಾರು 11:51ರ ವೇಳೆಗೆ, ಖೋಟಾಂಗ್ ಜಿಲ್ಲೆಯ ಕೆಪಿಲಾಸಗಧಿ ಗ್ರಾಮೀಣ ಮುನ್ಸಿಪಾಲಿಟಿಯ ಬೆಲಾಬೇಸಿ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ. ಹೆಲಿಕಾಪ್ಟರ್‌ನಲ್ಲಿ ಪೈಲಟ್ ಸೇರಿದಂತೆ ಒಟ್ಟು 6 ಮಂದಿ ಪ್ರಯಾಣಿಸುತ್ತಿದ್ದು, ಅವರಲ್ಲಿ ಒಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಅಪಘಾತ ಹೇಗೆ ನಡೆದಿದೆ?: ಪ್ರಾಥಮಿಕ ಮಾಹಿತಿ ಪ್ರಕಾರ, ಹೆಲಿಕಾಪ್ಟರ್ ಕೃಷಿ ಭೂಮಿಯಲ್ಲಿ ಇಳಿಯುವಾಗ ತೀವ್ರ ಗಾಳಿ ಹಾಗೂ ಧೂಳಿನಿಂದಾಗಿ ಅಪಘಾತ ಸಂಭವಿಸಿರಬಹದು ಎನ್ನಲಾಗಿದೆ. ಇದರಿಂದ ನಿಯಂತ್ರಣ ಕಳೆದುಕೊಂಡ ಹೆಲಿಕಾಪ್ಟರ್ ನೆಲಕ್ಕೆ ಅಪ್ಪಳಿಸಿ ಪಲ್ಟಿಯಾಗಿದ್ದು, ಅದರ ರೆಕ್ಕೆಗಳು ಮತ್ತು ದೇಹ ಭಾಗಗಳು ಹಾನಿಗೊಳಗಾಗಿವೆ.

ಈ ಹೆಲಿಕಾಪ್ಟರ್ ಕಾಠ್ಮಂಡುವಿನಿಂದ ಗ್ರಾಮಕ್ಕೆ ಮೃತದೇಹವೊಂದನ್ನು ಅಂತ್ಯಸಂಸ್ಕಾರಕ್ಕಾಗಿ ಸಾಗಿಸುತ್ತಿತ್ತು ಎಂದು ತಿಳಿದುಬಂದಿದೆ.

ರಕ್ಷಣಾ ಕಾರ್ಯಾಚರಣೆ: ಘಟನೆಯ ತಕ್ಷಣ ಸ್ಥಳೀಯರು ಮತ್ತು ಭದ್ರತಾ ಪಡೆಗಳು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದು, ಗಾಯಗೊಂಡ ವ್ಯಕ್ತಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.