Home Advertisement
Home ಕ್ರೀಡೆ ಟೆನ್‌ಪಿನ್ ಬೌಲಿಂಗ್ ಅಖಾಡದಲ್ಲಿ ಕನ್ನಡಿಗರ ಅಬ್ಬರ: ಕಿಶನ್, ಪ್ರಿಮಲ್ಹೊಸಚಾಂಪಿಯನ್ನರು!

ಟೆನ್‌ಪಿನ್ ಬೌಲಿಂಗ್ ಅಖಾಡದಲ್ಲಿ ಕನ್ನಡಿಗರ ಅಬ್ಬರ: ಕಿಶನ್, ಪ್ರಿಮಲ್ಹೊಸಚಾಂಪಿಯನ್ನರು!

0
14

ಬೆಂಗಳೂರಿನ ಚರ್ಚ್‌ಸ್ಟ್ರೀಟ್‌ನಲ್ಲಿ ನಡೆದ 34ನೇ ರಾಷ್ಟ್ರೀಯ ಟೆನ್‌ಪಿನ್ ಬೌಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಕ್ರೀಡಾಪಟುಗಳು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಸ್ಥಳೀಯ ಅಭಿಮಾನಿಗಳ ಸಮ್ಮುಖದಲ್ಲಿ ನಡೆದ ಈ ರೋಚಕ ಕ್ರೀಡಾಕೂಟದಲ್ಲಿ ಕಿಶನ್ ಆರ್ ಮತ್ತು ಪ್ರಿಮಲ್ ಜೆ ಅವರು ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಪುರುಷರ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಆಟಗಾರನಾಗಿ ಕಣಕ್ಕಿಳಿದಿದ್ದ ಕರ್ನಾಟಕದ ಕಿಶನ್ ಆರ್, ಮತ್ತೊಮ್ಮೆ ತಮ್ಮ ಅಪ್ರತಿಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಇದು ಅವರ ವೃತ್ತಿಜೀವನದ ಎರಡನೇ ರಾಷ್ಟ್ರೀಯ ಚಾಂಪಿಯನ್ ಪಟ್ಟವಾಗಿದೆ. ಫೈನಲ್ ಪಂದ್ಯದಲ್ಲಿ ಕಿಶನ್, ಆಕಾಶ್ ಅಶೋಕ್ ಕುಮಾರ್ ವಿರುದ್ಧ ಭರ್ಜರಿ ಪೈಪೋಟಿ ನಡೆಸಿದರು. ಮೊದಲ ಗೇಮ್‌ನಲ್ಲಿ 208-191 ಅಂಕಗಳ ಮುನ್ನಡೆ ಸಾಧಿಸಿದ ಕಿಶನ್, ಎರಡನೇ ಗೇಮ್‌ನಲ್ಲಿಯೂ ಅಧಿಪತ್ಯ ಮುಂದುವರಿಸಿ 244 ಅಂಕಗಳನ್ನು ಕಲೆಹಾಕಿದರು. ಅಂತಿಮವಾಗಿ ಒಟ್ಟು 452-429 ಅಂಕಗಳ ಅಂತರದಲ್ಲಿ ಆಕಾಶ್ ಅವರನ್ನು ಮಣಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.

15 ವರ್ಷಗಳ ನಂತರ ಪ್ರಿಮಲ್ ಜೆ ಸೃಷ್ಟಿಸಿದ ಇತಿಹಾಸ:  ಮಹಿಳಾ ವಿಭಾಗದಲ್ಲಿ ಕರ್ನಾಟಕದ ಪ್ರಿಮಲ್ ಜೆ ಅವರ ಗೆಲುವು ಕೇವಲ ವೈಯಕ್ತಿಕ ಸಾಧನೆಯಾಗಿರದೆ, ಇಡೀ ರಾಜ್ಯಕ್ಕೆ ಸಂದ ಗೌರವವಾಗಿದೆ. ಈ ವಿಭಾಗದಲ್ಲಿ ಕರ್ನಾಟಕವು ಬರೋಬ್ಬರಿ 15 ವರ್ಷಗಳ ನಂತರ ರಾಷ್ಟ್ರೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ನಾಲ್ಕನೇ ಶ್ರೇಯಾಂಕದ ಆಟಗಾರ್ತಿಯಾಗಿ ಟೂರ್ನಿ ಆರಂಭಿಸಿದ್ದ ಪ್ರಿಮಲ್, ಪ್ರಬಲ ಪೈಪೋಟಿ ನೀಡುತ್ತಾ ಫೈನಲ್‌ಗೆ ಲಗ್ಗೆ ಇಟ್ಟರು. ಅಂತಿಮ ಪಂದ್ಯದಲ್ಲಿ ತಮಿಳುನಾಡಿನ ಸಬೇನಾ ಅತಿಕಾ ಅವರ ಸವಾಲನ್ನು ಸಮರ್ಥವಾಗಿ ಎದುರಿಸಿದ ಪ್ರಿಮಲ್, 332-308 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಈ ಮೂಲಕ ತಮ್ಮ ಚೊಚ್ಚಲ ರಾಷ್ಟ್ರೀಯ ಪಟ್ಟ ಅಲಂಕರಿಸಿದರು.

ಫೈನಲ್‌ ತಲುಪುವ ಮುನ್ನ ನಡೆದ ಪಂದ್ಯಗಳು ಕ್ರೀಡಾಪ್ರೇಮಿಗಳ ಉಸಿರು ಬಿಗಿಹಿಡಿಯುವಂತೆ ಮಾಡಿದ್ದವು. ಪುರುಷರ ವಿಭಾಗದಲ್ಲಿ ಆಕಾಶ್ ಅವರು ಫೈನಲ್‌ಗೆ ಬರುವ ಮುನ್ನ ಧ್ರುವ ಸಾರ್ದಾ ಮತ್ತು ಶಣ್ಮುಗನಂದ ಅವರನ್ನು ಸೋಲಿಸಿದ್ದರು. ಇತ್ತ ಮಹಿಳಾ ವಿಭಾಗದಲ್ಲಿ ಪ್ರಿಮಲ್ ಅವರು ಮಹಾರಾಷ್ಟ್ರದ ಶಬೀನಾ ಕಸ್ಮಾನಿ ಮತ್ತು ಹರಿಯಾಣದ ಅನುಕೃತಿ ಬಿಷ್ಣೋಯಿ ಅವರ ವಿರುದ್ಧ ಅತ್ಯಂತ ತಾಳ್ಮೆಯ ಆಟ ಪ್ರದರ್ಶಿಸಿ ಗೆದ್ದಿದ್ದರು.

ಬೆಂಗಳೂರಿನ ‘ಅಮೀಬಾ’ ಬೌಲಿಂಗ್ ಸೆಂಟರ್‌ನಲ್ಲಿ ನಡೆದ ಈ ಚಾಂಪಿಯನ್‌ಶಿಪ್‌ನಲ್ಲಿ ಕನ್ನಡಿಗರೇ ಉಭಯ ವಿಭಾಗಗಳಲ್ಲಿ ಪ್ರಶಸ್ತಿ ಬಾಚಿಕೊಂಡಿರುವುದು ರಾಜ್ಯದ ಕ್ರೀಡಾ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಅಂಕಗಳ ಏರಿಳಿತ ಮತ್ತು ಪಿನ್‌ಗಳನ್ನು ಬೀಳಿಸುವ ಕೌಶಲದಲ್ಲಿ ಕನ್ನಡಿಗರು ತೋರಿದ ಚಾಣಾಕ್ಷತನ ಮೆಚ್ಚುವಂತದ್ದು. ಕಿಶನ್ ಅವರ ಅನುಭವ ಮತ್ತು ಪ್ರಿಮಲ್ ಅವರ ಹೋರಾಟದ ಮನೋಭಾವ ಇಂದಿನ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದೆ.