ಗ್ಲಾಸ್ಕೋ: 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪ್ಯಾರಾ ಅಥ್ಲೀಟ್‌ಗಳು ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡಿದ್ದು, ಪುರುಷರ 100 ಮೀಟರ್ ಟಿ47 ವಿಭಾಗದಲ್ಲಿ ಭಾರತ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ತನ್ನದಾಗಿಸಿಕೊಂಡಿದೆ.
ಪುರುಷರ 100 ಮೀಟರ್ ಟಿ47 ಫೈನಲ್‌ನಲ್ಲಿ ಭಾರತದ ದಿಲೀಪ್ ಮಹಾದು ಗವಿತ್ 10.71 ಸೆಕೆಂಡುಗಳಲ್ಲಿ ಗುರಿ ತಲುಪಿ ಗೇಮ್ಸ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು. ಈ ಮೂಲಕ ಹಿಂದಿನ ಕಾಮನ್‌ವೆಲ್ತ್ ಗೇಮ್ಸ್ ದಾಖಲೆಯನ್ನು ಮುರಿದು ಹೊಸ ದಾಖಲೆ ನಿರ್ಮಿಸಿದರು.
ಇದೇ ಸ್ಪರ್ಧೆಯಲ್ಲಿ ಭಾರತದ ಮತ್ತೋರ್ವ ಅಥ್ಲೀಟ್ ಮೊಹಮ್ಮದ್ ಬಾಸಿಲ್ ಮೊರ್ಸಿಂಗನಕಥಿ 10.83 ಸೆಕೆಂಡುಗಳಲ್ಲಿ ಓಟ ಪೂರ್ಣಗೊಳಿಸಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರು. ಒಂದೇ ಸ್ಪರ್ಧೆಯಲ್ಲಿ ಭಾರತ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆಲ್ಲುವ ಮೂಲಕ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ತನ್ನ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಲಭಿಸಿದ ಮೂರನೇ ಚಿನ್ನದ ಪದಕ ಇದಾಗಿದೆ. ಇದಕ್ಕೂ ಮೊದಲು ಮಹಿಳೆಯರ ಶಾಟ್‌ಪುಟ್ ಎಫ್57 ವಿಭಾಗದಲ್ಲಿ ಶರ್ಮಿಳಾ ಹಾಗೂ ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಚಿನ್ನದ ಪದಕ ಗೆದ್ದು ಭಾರತದ ಪದಕ ಬೇಟೆಗೆ ಚಾಲನೆ ನೀಡಿದ್ದರು.
ಹೋರಾಟದಿಂದ ಚಿನ್ನದ ಸಾಧನೆ: ಮಹಾರಾಷ್ಟ್ರದ ನಾಸಿಕ್ ಸಮೀಪದ ತೋರಣ್ ಡೊಂಗರಿ ಎಂಬ ಪುಟ್ಟ ಹಳ್ಳಿಯಲ್ಲಿ ಕೃಷಿಕ ಕುಟುಂಬದಲ್ಲಿ ಜನಿಸಿದ ದಿಲೀಪ್ ಮಹಾದು ಗವಿತ್ ಅವರ ಬದುಕು ಬಾಲ್ಯದಲ್ಲೇ ದೊಡ್ಡ ತಿರುವು ಪಡೆದುಕೊಂಡಿತ್ತು. ಆರು ವರ್ಷದ ವಯಸ್ಸಿನಲ್ಲಿ ಮರದಿಂದ ಬಿದ್ದು ಬಲಗೈಗೆ ತೀವ್ರ ಗಾಯವಾಗಿತ್ತು. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯದ ಕಾರಣ ಗಾಯ ಗ್ಯಾಂಗ್ರೀನ್ ಆಗಿ ಬದಲಾಗಿದ್ದು, ಮೊಣಕೈ ಕೆಳಭಾಗದ ಬಲಗೈಯನ್ನು ಕತ್ತರಿಸಬೇಕಾದ ಪರಿಸ್ಥಿತಿ ಎದುರಾಯಿತು.
ಆದರೂ ಇದರಿಂದ ಕುಗ್ಗದ ದಿಲೀಪ್, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ತಮ್ಮ ಪ್ರತಿಭೆಯನ್ನು ಮೆರೆದರು. ಹಳ್ಳಿಯ ಧೂಳಿನ ರಸ್ತೆಗಳಲ್ಲಿ ಓಡಿ ಅಭ್ಯಾಸ ಮಾಡುತ್ತಿದ್ದ ಅವರ ಸಾಮರ್ಥ್ಯವನ್ನು ತರಬೇತುದಾರ ವೈಜನಾಥ್ ಕೇಲ್ ಗುರುತಿಸಿ, ವೃತ್ತಿಪರ ತರಬೇತಿ ನೀಡಿದರು. ಅವರ ಮಾರ್ಗದರ್ಶನದಲ್ಲೇ ದಿಲೀಪ್ ಇಂದು ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.






















