ಬಸವನಬಾಗೇವಾಡಿ (ವಿಜಯಪುರ): ಮನಗೂಳಿ–ಬಿಚ್ಚಳ ರಾಜ್ಯ ಹೆದ್ದಾರಿಯ ಬಸವನಟ್ಟಿ ಕ್ರಾಸ್ ಸಮೀಪ ಮೌನೇಶ್ವರ ಗುಡಿಯ ಬಳಿ ಸ್ವಿಫ್ಟ್ ಡಿಸೈರ್ ಕಾರು ಪಲ್ಟಿಯಾಗಿ ಇಬ್ಬರು ಮೃತಪಟ್ಟಿರುವ ದುರ್ಘಟನೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮುಳವಾಡ ಗ್ರಾಮದ ರಾಮಪ್ಪ ಗಂಗಣ್ಣ ಅವರಾದಿ (65) ಹಾಗೂ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಡಾಬ್ಯಾಕೋಡ ಗ್ರಾಮದ ಚಂದ್ರವ್ವ ದರೆಪ್ಪ ಟಕ್ಕಣ್ಣವರ (70) ಎಂದು ಗುರುತಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಮುಳವಾಡ ಗ್ರಾಮದಿಂದ ಶ್ರೀಶೈಲದ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ವೇಗ ಮತ್ತು ನಿರ್ಲಕ್ಷ್ಯ ಚಾಲನೆ ಕಾರಣ : ಕಾರನ್ನು ಚಾಲನೆ ಮಾಡುತ್ತಿದ್ದ ಕೃಷ್ಣಾ ರಾಮಪ್ಪ ಅವರಾದಿ ಎಂಬವರು ಬಸವನಬಾಗೇವಾಡಿಯಿಂದ ಹುಣಶ್ಯಾಳ ಕಡೆಗೆ ತೆರಳುತ್ತಿದ್ದಾಗ ವೇಗವಾಗಿ ಹಾಗೂ ನಿರ್ಲಕ್ಷ್ಯವಾಗಿ ವಾಹನ ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗೂಟು ಕಲ್ಲಿಗೆ ಡಿಕ್ಕಿ ಹೊಡೆದು ಕಾರು ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.
ಅಪಘಾತದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇಬ್ಬರಿಗೆ ಗಾಯ : ಈ ಅಪಘಾತದಲ್ಲಿ ಸೇವಂತಿ ರಾಮಪ್ಪ ಅವರಾದಿ (50), ಕಾರು ಚಾಲಕ ಕೃಷ್ಣಾ ರಾಮಪ್ಪ ಅವರಾದಿ ಇಬ್ಬರೂ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣ ದಾಖಲು: ಈ ಕುರಿತು ರಬಕವಿ–ಬನ್ನಟ್ಟಿ ತಾಲೂಕಿನ ಹನಗಂಡಿ ಗ್ರಾಮದ ಸಿದ್ದಪ್ಪ ಪೂಜಾರಿ ಅವರು ನೀಡಿದ ದೂರಿನನ್ವಯ ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಧಿಕಾರಿಗಳ ಭೇಟಿ : ಅಪಘಾತ ಸ್ಥಳಕ್ಕೆ ವಿಜಯಪುರ ಹೆಚ್ಚುವರಿ ಎಸ್‌ಪಿ ರಾಮನಗೌಡ ಹಟ್ಟಿ, ಬಸವನಬಾಗೇವಾಡಿ ಡಿವೈಎಸ್‌ಪಿ ಬಲಪ್ಪ ನಂದಗಾಂವಿ, ಬಸವನಬಾಗೇವಾಡಿ ಪೊಲೀಸ್ ಠಾಣೆಯ ಪಿಐ ಗುರುಶಾಂತ ದಾಶ್ಯಾಳ ಹಾಗೂ ಪಿಎಸ್‌ಐ (ಅಪರಾಧ ವಿಭಾಗ) ವಿನೋದ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.























