ನವದೆಹಲಿ: ಭಾರತದಲ್ಲಿ ಚಲನಚಿತ್ರ ವೀಕ್ಷಣೆಯನ್ನು ಎಲ್ಲ ವರ್ಗದ ಜನರಿಗೆ ಹೆಚ್ಚು ಸಮಾನ ಮತ್ತು ಸುಲಭವಾಗಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿರುವ Central Board of Film Certification (CBFC) ಚಲನಚಿತ್ರ ಪ್ರಮಾಣೀಕರಣಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೊಳಿಸಿದ್ದು, ಅವು 2026ರ ಮಾರ್ಚ್ 15ರಿಂದ ಕಡ್ಡಾಯವಾಗಿ ಜಾರಿಗೆ ಬರುತ್ತಿವೆ.
ಈ ನಿಯಮಗಳ ಪ್ರಕಾರ, ಸೆನ್ಸಾರ್ ಪ್ರಮಾಣೀಕರಣಕ್ಕಾಗಿ ಸಲ್ಲಿಸುವ ಎಲ್ಲಾ ಚಲನಚಿತ್ರಗಳು ಶ್ರವಣದೋಷವುಳ್ಳವರಿಗಾಗಿ ಕ್ಲೋಸ್ಡ್ ಕ್ಯಾಪ್ಶನ್ (Closed Caption) ಮತ್ತು ದೃಷ್ಟಿಹೀನರಿಗಾಗಿ ಆಡಿಯೋ ಡಿಸ್ಕ್ರಿಪ್ಷನ್ (Audio Description) ಸೌಲಭ್ಯಗಳನ್ನು ಹೊಂದಿರಲೇಬೇಕು.
ಈ ಕ್ರಮವು ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸುವಾಗ ವಿಕಲಚೇತನರೂ ಸಹ ಸಮಾನ ಅನುಭವ ಪಡೆಯುವಂತೆ ಮಾಡುವ ಉದ್ದೇಶ ಹೊಂದಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಕಡ್ಡಾಯ ಸಬ್‌ಟೈಟಲ್ ಹಾಗೂ ಆಡಿಯೋ ವಿವರಣೆ : ಈ ಹೊಸ ನಿಯಮದ ಪ್ರಕಾರ ಚಿತ್ರದಲ್ಲಿ ಸಂಭಾಷಣೆ, ಧ್ವನಿ ಪರಿಣಾಮಗಳನ್ನು ವಿವರಿಸುವ ಕ್ಲೋಸ್ಡ್ ಕ್ಯಾಪ್ಶನ್ (CC) ಇರಬೇಕು, ದೃಷ್ಟಿಹೀನರಿಗೆ ದೃಶ್ಯಗಳನ್ನು ವಿವರಿಸುವ ಆಡಿಯೋ ಡಿಸ್ಕ್ರಿಪ್ಷನ್ (AD) ಟ್ರ್ಯಾಕ್ ಇರಬೇಕು. ಈ ಎರಡು ತಾಂತ್ರಿಕ ವೈಶಿಷ್ಟ್ಯಗಳು ಇಲ್ಲದೆ ಚಿತ್ರಗಳನ್ನು ಸೆನ್ಸಾರ್ ಪ್ರಮಾಣೀಕರಣಕ್ಕೆ ಸಲ್ಲಿಸಲು ಸಾಧ್ಯವಿಲ್ಲ.
ಡಿಜಿಟಲ್ ಫೈಲಿಂಗ್ ಕಡ್ಡಾಯ: ನಿರ್ಮಾಪಕರು ತಮ್ಮ ಚಿತ್ರಗಳನ್ನು ಡಿಜಿಟಲ್ ಸಿನಿಮಾ ಪ್ಯಾಕೇಜ್ (DCP) ರೂಪದಲ್ಲಿ ಸಿದ್ಧಪಡಿಸಿ, ಉಪಶೀರ್ಷಿಕೆ ಫೈಲ್‌ಗಳು ಮತ್ತು ಆಡಿಯೋ ವಿವರಣೆ ಟ್ರ್ಯಾಕ್‌ಗಳೊಂದಿಗೆ ಸರ್ಕಾರದ e‑Cinepramaan Portal ಮೂಲಕವೇ ಅಪ್‌ಲೋಡ್ ಮಾಡಬೇಕಾಗಿದೆ.
ಈ ವ್ಯವಸ್ಥೆಯಿಂದ ನಿರ್ಮಾಪಕರು ಭೌತಿಕವಾಗಿ ಕಚೇರಿಗಳಿಗೆ ಭೇಟಿ ನೀಡುವ ಅವಶ್ಯಕತೆ ಕಡಿಮೆಯಾಗಲಿದೆ.
ನಿಯಮದ ಹಿನ್ನೆಲೆ: ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 2024ರ ಮಾರ್ಚ್ 15ರಂದು “Accessibility Standards in Feature Films” ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು. ಆ ಮಾರ್ಗಸೂಚಿಗಳು ಎರಡು ವರ್ಷಗಳ ನಂತರ ಕಡ್ಡಾಯವಾಗುತ್ತವೆ ಎಂದು ಘೋಷಿಸಲಾಗಿತ್ತು.
ಈಗ 2026ರ ಮಾರ್ಚ್ 15ರಿಂದ ಅವು ಜಾರಿಗೆ ಬರುತ್ತಿದ್ದು, Central Board of Film Certification ಕೊಲ್ಕತ್ತಾ ಕಚೇರಿ ಎಲ್ಲಾ ರಾಜ್ಯಗಳ ಚಿತ್ರ ನಿರ್ಮಾಪಕರಿಗೆ ರಿಮೈಂಡರ್ ಕಳುಹಿಸಿದೆ.





















