Home Advertisement
Home ನಮ್ಮ ಜಿಲ್ಲೆ ಬಾಗಲಕೋಟೆ ಎಲ್‌ಪಿಜಿಗೆ ಪರ್ಯಾಯವಾಗಿ ಎಥೆನಾಲ್ ಸ್ಟೋವ್‌ ಬಳಸಲು ಸಲಹೆ

ಎಲ್‌ಪಿಜಿಗೆ ಪರ್ಯಾಯವಾಗಿ ಎಥೆನಾಲ್ ಸ್ಟೋವ್‌ ಬಳಸಲು ಸಲಹೆ

0
162

ಬಾಗಲಕೋಟೆ: ಯುದ್ಧದ ಕಾರಣದಿಂದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಕೊರತೆ ಉಂಟಾಗಿರುವುದರಿಂದ ಪರ್ಯಾಯವಾಗಿ ಎಥೆನಾಲ್ ಸ್ಟೋವ್ ಬಳಸಲು ಸರ್ಕಾರ ಪ್ರೋತ್ಸಾಹಿಸಬೇಕು ಎಂದು ನಿರಾಣಿ ಉದ್ಯಮ ಸಮೂಹದ ಅಧ್ಯಕ್ಷ, ಮಾಜಿ‌ ಸಚಿವ ಮುರುಗೇಶ್ ನಿರಾಣಿ ಮಹತ್ವದ ಸಲಹೆ ನೀಡಿದ್ದಾರೆ.

2004ರಲ್ಲಿ ಎಥೆನಾಲ್ ಸ್ಟೋವ್ ಅಭಿವೃದ್ಧಿಪಡಿಸಲಾಗಿದೆ. ಇದು ಕೆರೋಸಿನ್ ಸ್ಟೋವ್ ಮಾದರಿಯಲ್ಲಿ ಇದೆ. ಸರಳ ತಂತ್ರಜ್ಞಾನವನ್ನು ಹೊಂದಿದೆ. ಭಾರತದ ವಿವಿಧ ಭಾಗಗಳಲ್ಲಿ ಸುಮಾರು 24 ಲಕ್ಷ ಕುಟುಂಬಗಳು ಈ ಮಾದರಿಯ ಸ್ಟೋವ್ ಬಳಸುತ್ತಿವೆ. ಎಲ್‌ಪಿಜಿ ಗ್ಯಾಸ್‌ಗೆ ಹೋಲಿಸಿದರೆ ಬೆಲೆ ತುಸು ಹೆಚ್ಚಾಗಬಹುದು. ಆದರೆ ಇದು ಪರಿಸರ ಸ್ನೇಹಿ ಮತ್ತು ಸುರಕ್ಷಿತ ವಿಧಾನವಾಗಿದೆ ಎಂದು ನಿರಾಣಿ ಹೇಳಿದ್ದಾರೆ.

ಕಬ್ಬು, ಮೆಕ್ಕೆಜೋಳ, ಕಳಪೆ ಗುಣಮಟ್ಟ ಅಕ್ಕಿ, ಹುಲ್ಲು, ಸಿಹಿ ಜೋಳ ಮುಂತಾದ ಕೃಷಿ ಉತ್ಪನ್ನಗಳನ್ನು ಬಳಸಿಕೊಂಡು ಎಥೆನಾಲ್ ಉತ್ಪಾದಿಸಬಹುದಾಗಿದೆ. ಎಥೆನಾಲ್ ಗೃಹಬಳಕೆ ಇಂಧನವಾಗಿ ಬಳಸಲು ಆರಂಭಿಸಿದರೆ ರೈತರಿಗೆ ದೊಡ್ಡ ಪ್ರಮಾಣದಲ್ಲಿ ಅನುಕೂಲವಾಗುತ್ತದೆ. ಕೃಷಿ ಉತ್ಪನ್ನಗಳಿಗೆ ಒಳ್ಳೆಯ ಮಾರುಕಟ್ಟೆ ದೊರೆಯುತ್ತದೆ. ಆತ್ಮನಿರ್ಭರ ಭಾರತ ಇದರಿಂದ ಖಂಡಿತವಾಗಿಯೂ ಸಾಕಾರಗೊಳ್ಳುತ್ತದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಸಾಕಷ್ಟು ಎಥೆನಾಲ್ ಉತ್ಪಾದನೆಯಾಗುತ್ತಿದೆ. ಈ ಅನುಕೂಲತೆಯನ್ನು ಸರಿಯಾಗಿ ಬಳಸಿಕೊಂಡು ಹೋಟೆಲ್, ಹಾಸ್ಟೆಲ್, ಲಾಜಿಂಗ್‌ಗಳಲ್ಲಿ ಈ ವಿಧಾನವನ್ನು ಸುಲಭವಾಗಿ ಜಾರಿಗೊಳಿಸಿ ಜನರಿಗೆ ಪರ್ಯಾಯ ಕಲ್ಪಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು ಎಂದಿದ್ದಾರೆ.

ಅನೇಕ ಮುಂದುವರಿದ ದೇಶಗಳು ಅಡಿಗೆಯ ಮನೆಯ ಇಂಧನವಾಗಿ ಎಥೆನಾಲ್ ಬಳಸುತ್ತಿವೆ. ನಮ್ಮಲ್ಲಿಯೂ ಈ ಚಿಂತನೆ ಸಾಕಾರಗೊಳ್ಳಬೇಕು ಎಂಬ ಆಶಯವನ್ನು ನಿರಾಣಿ ವ್ಯಕ್ತಪಡಿಸಿದ್ದಾರೆ.