ಟೆಹ್ರಾನ್: ಅಮೆರಿಕ-ಇಸ್ರೇಲ್ ಮತ್ತು ಇರಾನ್ ಮಧ್ಯೆ ಸಂಘರ್ಷ ಮುಂದುವರಿದಿರುವ ನಡುವೆಯೇ ಥಾಯ್ಲೆಂಡ್ ಧ್ವಜ ಹೊತ್ತ ಸರಕು ಸಾಗಣೆ ಹಡಗು ಬುಧವಾರ ಗುಜರಾತ್‌ಗೆ ಬರುತ್ತಿದ್ದಾಗ ಹೊರ್ಮುಜ್ ಜಲಸಂಧಿಯಲ್ಲಿ ಅದರ ಮೇಲೆ ಕ್ಷಿಪಣಿ ದಾಳಿ ನಡೆದಿದೆ.
ಹಡಗಿನಲ್ಲಿದ್ದ 20 ಸಿಬ್ಬಂದಿಯನ್ನು ಯಶಸ್ವಿಯಾಗಿ ರಕ್ಷಿಸಲಾಗಿದ್ದು, ಇಂಜಿನ್ ಕೋಣೆಯಲ್ಲಿದ್ದ ಮೂವರು ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಥಾಯ್ಲೆಂಡ್ ಮೂಲದ `ಮಯೂರಿ ನಾರಿ’ ಎಂಬ ಹೆಸರಿನ ಈ ಹಡಗು ಯುನೈಟೆಡ್ ಅರಬ್ ಎಮಿರೇಟ್ಸ್ನ ಖಲೀಫಾ ಬಂದರಿನಿಂದ ಹೊರಟು, ಗುಜರಾತ್‌ನ ಕಾಂಡ್ಲಾ ಬಂದರಿಗೆ ಬರುತ್ತಿತ್ತು.
ಓಮನ್ ಕರಾವಳಿಯಿಂದ ಸುಮಾರು 11 ನಾಟಿಕಲ್ ಮೈಲಿ ದೂರದಲ್ಲಿರುವಾಗ ಎರಡು ಕ್ಷಿಪಣಿಗಳು ಹಡಗಿನ ಹಿಂಭಾಗಕ್ಕೆ ಅಪ್ಪಳಿಸಿವೆ. ಹಡಗಿನಲ್ಲಿದ್ದ ಒಟ್ಟು 23 ಸಿಬ್ಬಂದಿಗಳಲ್ಲಿ 20 ಮಂದಿ ಲೈಫ್‌ರಾಫ್ಟ್‌ಗಳ ಮೂಲಕ ಸಮುದ್ರಕ್ಕೆ ಜಿಗಿದಿದ್ದರು. ಒಮನ್ ನೌಕಾಪಡೆಯು ತಕ್ಷಣ ಸ್ಥಳಕ್ಕೆ ಧಾವಿಸಿ ಅವರನ್ನು ರಕ್ಷಿಸಿ ಸುರಕ್ಷಿತವಾಗಿ ಕರೆದೊಯ್ದಿದೆ ಎನ್ನಲಾಗಿದೆ.
ಹರ್ಮುಜ್ ಜಲಸಂಧಿಯಲ್ಲಿ ಟ್ಯಾಂಕರ್‌ಗಳನ್ನು ತಡೆಹಿಡಿಯಲಾಗುತ್ತದೆ ಎಂದು ಇರಾನ್ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಇರಾನ್‌ನ ಈ ನಿರ್ಧಾರದಿಂದ ಜಾಗತಿಕವಾಗಿ ತೈಲ ಬಿಕ್ಕಟ್ಟು ಹಾಗೂ ಆರ್ಥಿಕತೆ ತೊಂದರೆ ಎದುರಾಗಬಹುದು ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ.























