Home Advertisement
Home ನಮ್ಮ ಜಿಲ್ಲೆ ಬೆಳಗಾವಿ ಐಎಎಸ್: ಬೆಳಗಾವಿಯ ಕಿರಣ ಕಮತೆ ರಾಜ್ಯಕ್ಕೆ ಪ್ರಥಮ

ಐಎಎಸ್: ಬೆಳಗಾವಿಯ ಕಿರಣ ಕಮತೆ ರಾಜ್ಯಕ್ಕೆ ಪ್ರಥಮ

0
5

ಬೆಳಗಾವಿ: ಕಠಿಣ ಪರಿಶ್ರಮ, ನಿರಂತರ ಛಲ ಮತ್ತು ಗುರಿಯ ಮೇಲೆ ಅಚಲ ವಿಶ್ವಾಸ ಇದ್ದರೆ ಸಾಧನೆ ದೂರದಲ್ಲಿರುವುದಿಲ್ಲ ಎಂಬುದನ್ನು ಬೆಳಗಾವಿ ಜಿಲ್ಲೆಯ ಯುವಕ ಕಿರಣ ಸಣ್ಣಪ್ಪ ಕಮತೆ ಸಾಬೀತುಪಡಿಸಿದ್ದಾರೆ.

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಪ್ರಕಟಿಸಿದ 2025ನೇ ಸಾಲಿನ ಐಎಎಸ್ ಪರೀಕ್ಷಾ ಫಲಿತಾಂಶದಲ್ಲಿ ಚಿಕ್ಕೋಡಿ ತಾಲೂಕಿನ ಹತ್ತರವಾಟ ಗ್ರಾಮದ ಕಿರಣ ಕಮತೆ ದೇಶಕ್ಕೆ 53ನೇ ರ‍್ಯಾಂಕ್ ಪಡೆದು ಸಾಧನೆ ಮೆರೆದಿದ್ದು, ಕರ್ನಾಟಕಕ್ಕೆ ಪ್ರಥಮ ಸ್ಥಾನವನ್ನು ತಂದುಕೊಟ್ಟಿದ್ದಾರೆ.

ಹುಬ್ಬಳ್ಳಿಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ, ಬೆಳಗಾವಿ ಗೋಗಟೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ (ಸಿವಿಲ್) ಪದವಿ ಪಡೆದಿರುವ ಕಿರಣ, ಸದ್ಯ ಬೆಂಗಳೂರಿನ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಮುಖ್ಯ ಕಚೇರಿಯಲ್ಲಿ ಸಹಾಯಕ ಎಂಜಿನಿಯರ್‌ರಾಗಿದ್ದಾರೆ.

‌ಇದನ್ನೂ ಓದಿ: ಮೊದಲ ಪ್ರಯತ್ನದಲ್ಲಿಯೇ 400, ಮೂರನೇ ಬಾರಿ ದೇಶಕ್ಕೆ ಫಸ್ಟ್‌..!

ಕೆಲಸದ ಒತ್ತಡದ ನಡುವೆಯೂ ತಮ್ಮ ಕನಸನ್ನು ಕೈಬಿಡದೆ ನಿರಂತರ ಪ್ರಯತ್ನಿಸಿದ ಪರಿಣಾಮ ಇಂದು ಯುಪಿಎಸ್‌ಸಿ ಎಂಬ ಅತ್ಯಂತ ಕಠಿಣ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿ ಬೆಳಗಾವಿ ಜಿಲ್ಲೆಯ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ. ಇದು ಕಿರಣ ಅವರ ಆರನೇ ಪ್ರಯತ್ನ.

ಸಾಮಾನ್ಯ ಕುಟುಂಬದ ಸಾಧನೆ: ಕಿರಣ ಅವರ ತಂದೆ ಸಣ್ಣಪ್ಪ ಕಮತೆ ನಿಡಸೋಸಿಯ ಹೀರಾ ಶುಗರ್ಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಚಾರ್ಯರಾಗಿದ್ದು, ತಾಯಿ ರುಕ್ಮಿಣಿ ಗೃಹಿಣಿ. ಸಹೋದರಿ ಕೀರ್ತಿ ಬೆಂಗಳೂರಿನಲ್ಲಿ ಆರ್ಕಿಟೆಕ್ಟ್.

ಕಿರಣ ಮೊದಲ ಮತ್ತು ಎರಡನೇ ತರಗತಿಯನ್ನು ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಂಬೇಜೋಗಾಯಿ ಮರಾಠಿ ಪ್ರಾಥಮಿಕ ಶಾಲೆಯಲ್ಲಿ ಓದಿದ್ದು 3ರಿಂದ 8ನೇ ತರಗತಿಯನ್ನು ಹುಬ್ಬಳ್ಳಿಯ ಎಂ.ಆರ್.ಸಾಖರೆ ಆಂಗ್ಲ ಮಾಧ್ಯಮ ಶಾಲೆ, 9 ಮತ್ತು 10ನೇ ತರಗತಿಯನ್ನು ಗದಗದ ಕೆಎಲ್‌ಇ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂರ್ಣಗೊಳಿಸಿದರು.

‌ಇದನ್ನೂ ಓದಿ: ಹುಬ್ಬಳ್ಳಿ ಹುಡುಗಿ ಕೃಪಾಗೆ ಯುಪಿಎಸ್‌ಸ್ಸಿಯಲ್ಲಿ 190ನೇ ರ‍್ಯಾಂಕ್

ನಿಪ್ಪಾಣಿ ಜಿ.ಐ.ಬಾಗೇವಾಡಿ ಕಾಲೇಜಿನಲ್ಲಿ ಪಿಯುಸಿ ಸೈನ್ಸ್ ಮುಗಿಸಿ, ಬೆಳಗಾವಿಯ ಗೋಗಟೆ ಕಾಲೇಜಿನಲ್ಲಿ ಬಿಇ ಸಿವಿಲ್ ಪದವಿ ಪಡೆದರು. 2023ರಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿ ನೇಮಕಗೊಂಡಿದ್ದರು.

ಕೆಲಸ ಮಾಡುತ್ತಲೇ ಓದಿದೆ: ತಮ್ಮ ಸಾಧನೆ ಕುರಿತು ಮಾತನಾಡಿದ ಕಿರಣ ಕಮತೆ, “ಇದು ನನ್ನ ಕೊನೆಯ ಅವಕಾಶವಾಗಿತ್ತು. ಕೆಲಸ ಮಾಡುತ್ತಲೇ ದಿನಕ್ಕೆ ಐದಾರು ಗಂಟೆ ಓದುತ್ತಿದ್ದೆ. ಈ ಬಾರಿ ಪಾಸ್ ಆಗಬೇಕು ಎಂಬ ದೃಢನಿಶ್ಚಯದಿಂದ ಪರೀಕ್ಷೆ ಬರೆದಿದ್ದೆ. 250 ರೊಳಗೆ ರ‍್ಯಾಂಕ್ ಬರಬಹುದು ಎಂದು ನಿರೀಕ್ಷೆ ಇತ್ತು. ಆದರೆ 53ನೇ ರ‍್ಯಾಂಕ್ ಮತ್ತು ರಾಜ್ಯಕ್ಕೆ ಮೊದಲ ಸ್ಥಾನ ಸಿಕ್ಕಿದ್ದು ತುಂಬ ಸಂತೋಷ ತಂದಿದೆ. ಎಂದರು.

ಬಾಲ್ಯದಲ್ಲೇ ತಂದೆಯವರು ಯುಪಿಎಸ್‌ಸಿ ಕನಸು ಬಿತ್ತಿದ್ದರು. ಆ ಕನಸನ್ನು ನನಸು ಮಾಡಲು ಕಳೆದ ಆರು ವರ್ಷಗಳಿಂದ ಸತತವಾಗಿ ಪ್ರಯತ್ನಿಸಿದ್ದೆ. ಈ ಸಾಧನೆಯನ್ನು ತಂದೆ-ತಾಯಿಗೆ ಅರ್ಪಿಸುತ್ತೇನೆ,” ಎಂದು ಸಂತಸ ಹಂಚಿಕೊಂಡರು.