Home Advertisement
Home ನಮ್ಮ ಜಿಲ್ಲೆ ಉತ್ತರ ಕನ್ನಡ ಭವಿಷ್ಯದ ಇಂಧನ ಭದ್ರತೆಗೆ ಕೈಗಾದಲ್ಲಿ ಮಹತ್ವದ ಹೆಜ್ಜೆ

ಭವಿಷ್ಯದ ಇಂಧನ ಭದ್ರತೆಗೆ ಕೈಗಾದಲ್ಲಿ ಮಹತ್ವದ ಹೆಜ್ಜೆ

0
102

ಕಾರವಾರ: ದೇಶದ ಅಣು ವಿದ್ಯುತ್ ಕ್ಷೇತ್ರದಲ್ಲಿ ಅತ್ಯಂತ ಪ್ರಮುಖ ಸ್ಥಾನ ಪಡೆದಿರುವ ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣು ವಿದ್ಯುತ್ ಉತ್ಪಾದನಾ ಕೇಂದ್ರವು ಇದೀಗ ವಿಸ್ತರಣೆಯತ್ತ ದಾಪುಗಾಲು ಹಾಕುತ್ತಿದೆ. ಸುಮಾರು 21 ಸಾವಿರ ಕೋಟಿ ರೂಪಾಯಿಗಳ ಬೃಹತ್ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 5 ಮತ್ತು 6ನೇ ಘಟಕಗಳ ಮೊದಲ ಹಂತದ ಕಾಂಕ್ರೀಟೀಕರಣ ಕಾರ್ಯಕ್ಕೆ ಅಣು ಶಕ್ತಿ ಆಯೋಗದ ಅಧ್ಯಕ್ಷ ಹಾಗೂ ಕೇಂದ್ರ ಅಣುಶಕ್ತಿ ಇಲಾಖೆಯ ಕಾರ್ಯದರ್ಶಿಯಾದ ಡಾ. ಅಜಿತ್ ಕುಮಾರ್ ಮೊಹಂತಿ ಅವರು ಭಾನುವಾರ ಚಾಲನೆ ನೀಡಿದರು. ಈ ಮೂಲಕ ಕರಾವಳಿ ಭಾಗದಲ್ಲಿ ಇಂಧನ ಉತ್ಪಾದನೆಯ ಹೊಸ ಅಧ್ಯಾಯವೊಂದು ಅಧಿಕೃತವಾಗಿ ಆರಂಭಗೊಂಡಿದೆ.

ಕೈಗಾ ಕೇಂದ್ರವು 2000ನೇ ಇಸವಿಯಲ್ಲಿ ತನ್ನ ಮೊದಲ ಘಟಕದ ಮೂಲಕ ಕಾರ್ಯಾರಂಭ ಮಾಡಿತ್ತು. ಪ್ರಸ್ತುತ ಅಲ್ಲಿ ತಲಾ 220 ಮೆಗಾವ್ಯಾಟ್ ಸಾಮರ್ಥ್ಯದ ನಾಲ್ಕು ಘಟಕಗಳು ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿದ್ದು, ಹೆಚ್ಚುತ್ತಿರುವ ಇಂಧನದ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಹೊಸ ಘಟಕಗಳ ಅವಶ್ಯಕತೆ ಇತ್ತು. ಇದನ್ನು ಮನಗಂಡು ತಲಾ 700 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಬೃಹತ್ ಘಟಕಗಳ ಸ್ಥಾಪನೆಗೆ 2025ರಲ್ಲಿ ಚಾಲನೆ ನೀಡಲಾಗಿತ್ತು. ಇದೀಗ ಕಾಂಕ್ರೀಟೀಕರಣ ಪ್ರಕ್ರಿಯೆ ಆರಂಭವಾಗಿದ್ದು, ಈ ಬೃಹತ್ ನಿರ್ಮಾಣ ಕಾರ್ಯವನ್ನು 2030ರ ವೇಳೆಗೆ ಪೂರ್ಣಗೊಳಿಸುವ ಗುರಿ ಇರಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಇಸ್ರೇಲ್-ಇರಾನ್ ಯುದ್ಧದಿಂದಾಗಿ ವಿಮಾನ ರದ್ದು: ಪ್ರವಾಸಿಗರ ಪರದಾಟ

ಈ ಮಹತ್ವದ ಕಾರ್ಯಕ್ರಮದಲ್ಲಿ ಎನ್‌ಪಿಸಿಐಎಲ್ (NPCIL) ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಭುವನ್ ಚಂದ್ರ ಪಾಠಕ್, ಕೈಗಾ ಸೈಟ್ ಡೈರೆಕ್ಟರ್ ಬಿ. ವಿನೋದ್ ಕುಮಾರ್ ಮತ್ತು 5 ಹಾಗೂ 6ನೇ ಘಟಕದ ನಿರ್ದೇಶಕರಾದ ಕುಲಕರ್ಣಿ ಸೇರಿದಂತೆ ಇಲಾಖೆಯ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು. ಈ ಹೊಸ ಘಟಕಗಳು ಕಾರ್ಯಾರಂಭ ಮಾಡಿದರೆ ದಕ್ಷಿಣ ಭಾರತದ ರಾಜ್ಯಗಳಿಗೆ ಲಭ್ಯವಾಗುವ ವಿದ್ಯುತ್ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಲಿದ್ದು, ಕೈಗಾ ಕೇಂದ್ರದ ಒಟ್ಟು ಉತ್ಪಾದನಾ ಸಾಮರ್ಥ್ಯವು ಮತ್ತಷ್ಟು ಬಲಗೊಳ್ಳಲಿದೆ.