Home Advertisement
Home ನಮ್ಮ ಜಿಲ್ಲೆ ಬಾಗಲಕೋಟೆ ಬಾಗಲಕೋಟೆ: ಹಿಂದೂ ಕಾರ್ಯಕರ್ತರ ಬಂಧನ ಯತ್ನಕ್ಕೆ ತೀವ್ರ ವಿರೋಧ – ಪೊಲೀಸರೊಂದಿಗೆ ಸ್ಥಳೀಯರ ವಾಗ್ವಾದ

ಬಾಗಲಕೋಟೆ: ಹಿಂದೂ ಕಾರ್ಯಕರ್ತರ ಬಂಧನ ಯತ್ನಕ್ಕೆ ತೀವ್ರ ವಿರೋಧ – ಪೊಲೀಸರೊಂದಿಗೆ ಸ್ಥಳೀಯರ ವಾಗ್ವಾದ

0
170

ಬಾಗಲಕೋಟೆ: ನಗರದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತನ ಬಂಧನಕ್ಕೆ ಆಗಮಿಸಿದ್ದ ಪೊಲೀಸರೊಂದಿಗೆ ಸ್ಥಳೀಯರ ಮಧ್ಯೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಘಟನೆ ನಡೆದಿದೆ. ಮುತ್ತು ಮಾಗಿ ಎಂಬ ಯುವಕನನ್ನು ಖಾಸಗಿ ವಾಹನದಲ್ಲಿ ಬಂದ ಪೊಲೀಸರು ಏಕಾಏಕಿ ಬಂಧಿಸಲು ಮುಂದಾದಾಗ, ಸ್ಥಳೀಯರು ಕಾರಣ ಕೇಳಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಂಧನಕ್ಕೆ ಅಡ್ಡಿಪಡಿಸಿದ ಸ್ಥಳೀಯರು: ಪೊಲೀಸರು ಯುವಕನನ್ನು ತಮ್ಮ ವಾಹನಕ್ಕೆ ಕರೆದೊಯ್ಯಲು ಯತ್ನಿಸಿದ ವೇಳೆ, ಮಹಿಳೆಯರು ಸೇರಿದಂತೆ ಕೆಲವರು “ಬಂಧನದ ಕಾರಣ ತಿಳಿಸಬೇಕು” ಎಂದು ಒತ್ತಾಯಿಸಿ ಅಡ್ಡಿಪಡಿಸಿದರು. ಬಂಧನದ ಕುರಿತು ಸ್ಪಷ್ಟ ಮಾಹಿತಿ ನೀಡದೇ ಕ್ರಮ ಕೈಗೊಳ್ಳಲಾಗಿದೆ ಎಂಬ ಆಕ್ಷೇಪ ವ್ಯಕ್ತವಾಯಿತು. ಈ ವೇಳೆ ಸ್ಥಳೀಯರು ಮತ್ತು ಪೊಲೀಸರ ನಡುವೆ ವಾಗ್ವಾದ ಉಂಟಾಗಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಇದನ್ನೂ ಓದಿ: ಕಾರವಾರ:ಆಶಾ ಕಾರ್ಯಕರ್ತೆಯರ ಪ್ರತಿಭಟನೆ -ವೇತನ ಹೆಚ್ಚಳಕ್ಕೆ ಆಗ್ರಹ

ರಸ್ತೆ ತಡೆ: ಘಟನೆಯ ಸಂದರ್ಭದಲ್ಲಿ ಕೆಲವರು ರಸ್ತೆ ಮಧ್ಯೆ ಕಲ್ಲು ಹಾಗೂ ತಗಡುಗಳನ್ನು ಇಟ್ಟು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಘಟನೆ ನಡೆದಿದೆ. ಪರಿಣಾಮವಾಗಿ ಆ ಪ್ರದೇಶದಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕ ಅಡಚಣೆ ಉಂಟಾಯಿತು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಹೆಚ್ಚುವರಿ ಪಡೆ ನಿಯೋಜಿಸಿ, ಜನರನ್ನು ಚದುರಿಸಿದರು ಎಂದು ಮೂಲಗಳು ತಿಳಿಸಿವೆ.

ಘಟನೆಯ ಕುರಿತು ಮೇಲಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಬಂಧನ ಯತ್ನದ ಹಿಂದಿನ ಕಾರಣಗಳ ಬಗ್ಗೆ ಅಧಿಕೃತ ಸ್ಪಷ್ಟನೆ ನಿರೀಕ್ಷೆಯಲ್ಲಿದೆ. ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಯಾವುದೇ ದೊಡ್ಡ ಹಾನಿ ಸಂಭವಿಸಿಲ್ಲ ಎಂದು ಪೊಲೀಸ್ ವಲಯ ತಿಳಿಸಿದೆ.