ಕಲ್ಲಿದ್ದಲು ಡಿಪೋ ಅನುಮತಿ ಪ್ರಕರಣ: ಬಂಧನದ ಬಳಿಕ ಕೋಟ್ಯಂತರ ರೂಪಾಯಿ ವಶ
ಕಲ್ಲಿದ್ದಲು ವ್ಯವಹಾರಕ್ಕೆ ಸಂಬಂಧಿಸಿದ ಉದ್ಯಮಿಯಿಂದ ₹30 ಸಾವಿರ ಲಂಚ ಪಡೆದ ಆರೋಪದ ಮೇಲೆ ಓಡಿಶಾ ರಾಜ್ಯದ ಗಣಿ ಉಪ ನಿರ್ದೇಶಕ ದೇಬಬ್ರತ ಮೊಹಂತಿ ಅವರನ್ನು ವಿಜಿಲೆನ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧನದ ನಂತರ ನಡೆದ ದಾಳಿಯಲ್ಲಿ ಕೋಟ್ಯಾಂತರ ರೂಪಾಯಿ ನಗದು, ಚಿನ್ನ ಮತ್ತು ಐಷಾರಾಮಿ ಆಸ್ತಿಗಳ ಮಾಹಿತಿ ಬಹಿರಂಗವಾಗಿದೆ.
ಲಂಚ ಸ್ವೀಕರಿಸುವಾಗಲೇ ಬಂಧನ: ಕಲ್ಲಿದ್ದಲು ಡಿಪೋ ಕಾರ್ಯಾಚರಣೆಗೆ ಅನುಮತಿ ನೀಡಲು ಹಾಗೂ ಸಾರಿಗೆ ಪರ್ಮಿಟ್ ಒದಗಿಸಲು ಉದ್ಯಮಿಯಿಂದ ಲಂಚ ಕೇಳಿದ್ದ ಆರೋಪ ಮೊಹಂತಿ ವಿರುದ್ಧ ಕೇಳಿಬಂದಿತ್ತು. ಈ ವಿಷಯವನ್ನು ಉದ್ಯಮಿ Odisha Vigilance ಅಧಿಕಾರಿಗಳ ಗಮನಕ್ಕೆ ತಂದಿದ್ದರು.
ಇದನ್ನೂ ಓದಿ: ಮಕ್ಕಳ ರಕ್ಷಣೆ: ಅಸಭ್ಯ ವಿಷಯ ಪ್ರಸಾರ ಮಾಡಿದ 5 OTTಗಳು ಬ್ಯಾನ್
ಮಂಗಳವಾರ ರಾತ್ರಿ ಲಂಚ ಸ್ವೀಕರಿಸುತ್ತಿರುವಾಗಲೇ ಮೊಹಂತಿಯನ್ನು ಬಲೆ ಬೀಸಿ ಬಂಧಿಸಲಾಯಿತು.
ಏಕಕಾಲದಲ್ಲಿ ಹಲವು ಕಡೆ ದಾಳಿ: ಬಂಧನದ ಬಳಿಕ ವಿಜಿಲೆನ್ಸ್ ಅಧಿಕಾರಿಗಳು ಕಟಕ್, ಭದ್ರಕ್ ಮತ್ತು ಭುವನೇಶ್ವರದಲ್ಲಿರುವ ಮೊಹಂತಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದರು. ಕಟಕ್‌ನಲ್ಲಿರುವ ಫ್ಲ್ಯಾಟ್, ಭದ್ರಕ್ ಜಿಲ್ಲೆಯ ಮಠಸಾಹಿಯಲ್ಲಿರುವ ಪೋಷಕರ ಮನೆ, ಕಚೇರಿ ಕೋಣೆಗಳು, ಬಿಆರ್‌ಎಸ್ ಫ್ಲ್ಯಾಟ್‌ನೊಳಗಿನ ಟ್ರೋಲಿ ಬ್ಯಾಗ್ ಮತ್ತು ತಿಜೋರಿಯಲ್ಲಿ ದೊಡ್ಡ ಪ್ರಮಾಣದ ನಗದು ಪತ್ತೆಯಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ ₹4 ಕೋಟಿಗೂ ಅಧಿಕ ಹಣ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಹಣದ ಎಣಿಕೆ ಕಾರ್ಯ ಇನ್ನೂ ಮುಂದುವರಿದಿದೆ.
ಇದನ್ನೂ ಓದಿ: ಮಕ್ಕಳ ಭವಿಷ್ಯ vs ಡಿಜಿಟಲ್ ಯುಗ: ಮೊಬೈಲ್ ಬಳಕೆಗೆ ಮಿತಿ ಬೇಕೇ?
ಕಚೇರಿಯಲ್ಲೂ ಲಕ್ಷಾಂತರ ರೂಪಾಯಿ: ಮೊಹಂತಿಯ ಕಚೇರಿಯ ಡ್ರಾಯರ್‌ಗಳಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ನಗದು ಹಣ ಪತ್ತೆಯಾಗಿದೆ. ಜೊತೆಗೆ ಸುಮಾರು 130 ಗ್ರಾಂಗೂ ಅಧಿಕ ಚಿನ್ನ ವಶಕ್ಕೆ ಪಡೆಯಲಾಗಿದೆ.
ಐಷಾರಾಮಿ ಆಸ್ತಿಗಳ ಬಹಿರಂಗ: ಭುವನೇಶ್ವರ ನಗರದಲ್ಲಿ ಮೊಹಂತಿ ಎರಡು ಅರಮನೆಯಂತಹ ಐಷಾರಾಮಿ ಮನೆಗಳನ್ನು ಹೊಂದಿರುವುದು ಪತ್ತೆಯಾಗಿದೆ. ಅಧಿಕಾರಿಗಳು ಅವರ ಆಸ್ತಿ ವಿವರಗಳನ್ನು ಪರಿಶೀಲಿಸುತ್ತಿದ್ದು, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: ಹುಬ್ಬಳ್ಳಿಯ ರಾಜನಗರ ಮೈದಾನದಲ್ಲಿ ಮಾಜಿ ಸ್ಪಿನ್ನರ್‌ಗೆ ಅಪರೂಪದ ಗೌರವ
ಓಡಿಶಾದ ಇತಿಹಾಸದಲ್ಲೇ ದೊಡ್ಡ ದಾಳಿ?: ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಈ ದಾಳಿ ಓಡಿಶಾ ಇತಿಹಾಸದಲ್ಲಿಯೇ ಅತಿದೊಡ್ಡ ವಿಜಿಲೆನ್ಸ್ ಕಾರ್ಯಾಚರಣೆಯೊಂದಾಗಿ ಪರಿಗಣಿಸಲಾಗಿದೆ. ತನಿಖೆ ಮುಂದುವರಿದಿದ್ದು, ಇನ್ನಷ್ಟು ಆಸ್ತಿ ವಿವರಗಳು ಬಹಿರಂಗವಾಗುವ ಸಾಧ್ಯತೆ ಇದೆ.




















