Home ಸುದ್ದಿ ದೇಶ ರಾಷ್ಟ್ರಪತಿ ಭವನದಲ್ಲಿ ಲುಟ್ಯೆನ್ಸ್ ಪ್ರತಿಮೆ ಬದಲು ರಾಜಾಜಿ ಪ್ರತಿಮೆ

ರಾಷ್ಟ್ರಪತಿ ಭವನದಲ್ಲಿ ಲುಟ್ಯೆನ್ಸ್ ಪ್ರತಿಮೆ ಬದಲು ರಾಜಾಜಿ ಪ್ರತಿಮೆ

0
ರಾಷ್ಟ್ರಪತಿ ಭವನದಲ್ಲಿ ಲುಟ್ಯೆನ್ಸ್ ಪ್ರತಿಮೆ ಬದಲು ರಾಜಾಜಿ ಪ್ರತಿಮೆ

‘ಗುಲಾಮಗಿರಿಯ ಸಂಕೇತಗಳಿಂದ ಮುಕ್ತಿ’: ರಾಷ್ಟ್ರಪತಿ ಭವನದಲ್ಲಿ ರಾಜಾಜಿ ಪ್ರತಿಮೆ ಅನಾವರಣ

ನವದೆಹಲಿ: ರಾಷ್ಟ್ರಪತಿ ಭವನದ ಕೇಂದ್ರೀಯ ಪ್ರಾಂಗಣದಲ್ಲಿ ಸ್ಥಾಪಿತವಾಗಿದ್ದ ಬ್ರಿಟಿಷ್ ವಾಸ್ತುಶಿಲ್ಪಿ ಎಡ್ವಿನ್ ಲುಟ್ಯೆನ್ಸ್ ಅವರ ಪ್ರತಿಮೆಯ ಬದಲಿಗೆ ರಾಷ್ಟ್ರಪತಿ ಭವನದಲ್ಲಿ ಸ್ವತಂತ್ರ ಭಾರತದ ಮೊದಲ ಮತ್ತು ಏಕೈಕ ಭಾರತೀಯ ಗವರ್ನರ್ ಜನರಲ್ ಚಕ್ರವರ್ತಿ ರಾಜಗೋಪಾಲಾಚಾರಿ ಜಿ ಅವರ ಪ್ರತಿಮೆ ಇಂದು ಅನಾವರಣಗೊಂಡಿತು.

ಈ ಮುಂಚೆ ಭಾನುವಾರ (ಫೆ. 22) ರಂದು ಪ್ರಧಾನಿ ತಮ್ಮ ಜನಪ್ರಿಯ ರೇಡಿಯೋ ಕಾರ್ಯಕ್ರಮ Mann Ki Baatನಲ್ಲಿ ಈ ವಿಷಯ ಪ್ರಕಟಿಸಿದ್ದರು. ಸ್ವತಂತ್ರ ಭಾರತದ ಏಕೈಕ ಭಾರತೀಯ ಗವರ್ನರ್ ಜನರಲ್ ಚಕ್ರವರ್ತಿ ರಾಜಗೋಪಾಲಾಚಾರಿ (ರಾಜಾಜಿ) ಅವರ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.

ಇದನ್ನೂ ಓದಿ: ಕೇಂದ್ರದ ಮಾಜಿ ಸಚಿವ, ರಾಜಕೀಯ ಚಾಣಕ್ಯ ಮುಕುಲ್ ರಾಯ್ ನಿಧನ

ಕೇಂದ್ರೀಯ ಪ್ರಾಂಗಣದಲ್ಲಿ ಪ್ರತಿಮೆ ಸ್ಥಾಪನೆ : ಬ್ರಿಟಿಷ್ ವಾಸ್ತುಶಿಲ್ಪಿಗಳಾದ ಲುಟ್ಯೆನ್ಸ್ ಹಾಗೂ ಸರ್ ಹರ್ಬರ್ಟ್ ಬೇಕರ್ ವಿನ್ಯಾಸಗೊಳಿಸಿದ ರಾಷ್ಟ್ರಪತಿ ಭವನದ ಕೇಂದ್ರೀಯ ಪ್ರಾಂಗಣದಲ್ಲಿ (ಸೆಂಟ್ರಲ್ ಕೋರ್ಟ್‌ಯಾರ್ಡ್) ರಾಜಾಜಿ ಅವರ ಪ್ರತಿಮೆ ಪ್ರತಿಷ್ಠಾಪಿಸಲಾಗುತ್ತದೆ. ಇದುವರೆಗೆ ಅಲ್ಲಿ ಲುಟ್ಯೆನ್ಸ್ ಅವರ ಪ್ರತಿಮೆ ಇತ್ತು.

‘ಗುಲಾಮಗಿರಿಯ ಸಂಕೇತಗಳಿಂದ ಮುಕ್ತಿ’: 2022ರ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಉಲ್ಲೇಖಿಸಿದ್ದ ‘ಪಂಚ ಪ್ರಾಣ’ ಸಂದೇಶವನ್ನು ಪ್ರಧಾನಿ ನೆನಪಿಸಿಕೊಂಡು, ದೇಶವು ಗುಲಾಮಗಿರಿಯ ಸಂಕೇತಗಳಿಂದ ಮುಕ್ತಿ ಪಡೆಯುತ್ತಿರುವುದಾಗಿ ಹೇಳಿದರು. ವಸಾಹತುಶಾಹಿ ಕಾಲದ ಚಿಹ್ನೆಗಳನ್ನು ಹಿಂದಕ್ಕೆ ಸರಿಸಿ, ಭಾರತೀಯ ಸಂಸ್ಕೃತಿ ಮತ್ತು ಸ್ವಾತಂತ್ರ್ಯ ಹೋರಾಟದ ನಾಯಕರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಫೆಬ್ರವರಿ 27ಕ್ಕೆ ‘ಹಯಗ್ರೀವ’ ಬಿಡುಗಡೆ: ಟ್ರೇಲರ್‌ಗೆ ಭರ್ಜರಿ ಪ್ರತಿಕ್ರಿಯೆ

ರಾಷ್ಟ್ರಪತಿ ಭವನದಲ್ಲಿ ಬ್ರಿಟಿಷ್ ಆಡಳಿತಗಾರರ ಪ್ರತಿಮೆಗಳು ಉಳಿದಿದ್ದರೂ, ಭಾರತದ ಸ್ವಂತ ನಾಯಕರಿಗೆ ಅಲ್ಲಿ ಸ್ಥಾನ ಸಿಕ್ಕಿರಲಿಲ್ಲ ಎಂಬುದನ್ನು ಮೋದಿ ಉಲ್ಲೇಖಿಸಿದರು.

ರಾಜಾಜಿ ಉತ್ಸವ ಮತ್ತು ವಸ್ತುಪ್ರದರ್ಶನ : ‘ರಾಜಾಜಿ ಉತ್ಸವ’ದ ಅಂಗವಾಗಿ ಫೆಬ್ರವರಿ 24ರಿಂದ ಮಾರ್ಚ್ 1ರವರೆಗೆ ರಾಜಗೋಪಾಲಾಚಾರಿ ಅವರ ಜೀವನ ಹಾಗೂ ಸಾಧನೆಗಳ ಕುರಿತ ವಸ್ತುಪ್ರದರ್ಶನ ನಡೆಯಲಿದೆ. ಜನರು ಭೇಟಿ ನೀಡಿ ಅವರ ಕೊಡುಗೆಗಳನ್ನು ಅರಿಯುವಂತೆ ಪ್ರಧಾನಿ ಕರೆ ನೀಡಿದರು.

ಯಾರು ಸಿ. ರಾಜಗೋಪಾಲಾಚಾರಿ? : ರಾಜಾಜಿ ಎಂದೇ ಪ್ರಸಿದ್ಧರಾದ ಸಿ. ರಾಜಗೋಪಾಲಾಚಾರಿ ಅವರು ಸ್ವಾತಂತ್ರ್ಯ ಹೋರಾಟಗಾರ, ರಾಜನೀತಿಜ್ಞ, ಚಿಂತಕ ಮತ್ತು ಬರಹಗಾರರಾಗಿದ್ದರು. 1948ರಿಂದ 1950ರವರೆಗೆ ಅವರು ಭಾರತದ ಗವರ್ನರ್ ಜನರಲ್ ಆಗಿ ಸೇವೆ ಸಲ್ಲಿಸಿದ ಏಕೈಕ ಭಾರತೀಯರು. 1950ರಲ್ಲಿ ಭಾರತ ಗಣರಾಜ್ಯವಾದ ಬಳಿಕ ಈ ಹುದ್ದೆ ರದ್ದುಪಡಿಸಲಾಯಿತು.

ಅವರು ಹಿಂದಿನ ಮದ್ರಾಸ್ ರಾಜ್ಯದ ಮುಖ್ಯಮಂತ್ರಿಯಾಗಿ, ಸ್ವತಂತ್ರ ಪಕ್ಷದ ಸ್ಥಾಪಕರಾಗಿ, ಕೇಂದ್ರ ಗೃಹ ಸಚಿವರಾಗಿ ಹಾಗೂ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು. ಸಾರ್ವಜನಿಕ ಜೀವನದಲ್ಲಿ ಸರಳತೆ, ಆತ್ಮಸಂಯಮ ಮತ್ತು ಸ್ವತಂತ್ರ ಚಿಂತನೆಗಳಿಗಾಗಿ ರಾಜಾಜಿ ಹೆಸರಾಗಿದ್ದರು.

‘ಲುಟ್ಯೆನ್ಸ್ ದೆಹಲಿ’ ವಿವಾದದ ನಡುವೆ ನಿರ್ಧಾರ : ಲುಟ್ಯೆನ್ಸ್ ಮತ್ತು ಬೇಕರ್ ವಿನ್ಯಾಸಗೊಳಿಸಿದ ರಾಷ್ಟ್ರಪತಿ ಭವನ, ನಾರ್ತ್ ಬ್ಲಾಕ್, ಸೌತ್ ಬ್ಲಾಕ್ ಹಾಗೂ ಇಂಡಿಯಾ ಗೇಟ್ ಪ್ರದೇಶಗಳನ್ನು ಒಟ್ಟಾಗಿ ‘ಲುಟ್ಯೆನ್ಸ್ ದೆಹಲಿ’ ಎಂದು ಕರೆಯಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಈ ಪದಪ್ರಯೋಗ ರಾಜಕೀಯ ಚರ್ಚೆಗಳ ಕೇಂದ್ರವಾಗಿದ್ದು, ವಸಾಹತುಶಾಹಿ ಪರಂಪರೆಯ ಸಂಕೇತಗಳ ಕುರಿತು ತೀವ್ರ ಚರ್ಚೆ ನಡೆಯುತ್ತಿದೆ.

ಇದೀಗ ರಾಜಾಜಿ ಅವರ ಪ್ರತಿಮೆ ಸ್ಥಾಪನೆ ಮೂಲಕ ರಾಷ್ಟ್ರಪತಿ ಭವನದಲ್ಲಿ ಭಾರತೀಯ ನಾಯಕತ್ವಕ್ಕೆ ಆದ್ಯತೆ ನೀಡುವ ಸಂದೇಶ ನೀಡಲಾಗಿದೆ ಎಂದು ರಾಜಕೀಯ ವಲಯಗಳಲ್ಲಿ ಚರ್ಚೆ ಶುರುವಾಗಿದೆ.