ದಾವಣಗೆರೆ: ಬ್ಯಾಂಕ್‌ಗಳಿಗೆ ನಕಲಿ ದಾಖಲೆ ನೀಡಿ ʻಮ್ಯೂಲ್’ ಖಾತೆಗಳನ್ನು ತೆರೆಯುವ ಮೂಲಕ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಸೈಬರ್ ವಂಚನೆಗಳಿಗೆ ಸಹಕರಿಸುತ್ತಿದ್ದ ಇಬ್ಬರು ಆರೋಪಿತರನ್ನು ದಾವಣಗೆರೆ ಸೈಬರ್ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ಒಂದು ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿತರಾಗಿರುವ ವೈ. ಪರಶುರಾಮ (30) ಎಂಬಾತನನ್ನು ಮತ್ತು ಇನ್ನೋರ್ವ 19 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಾವಣಗೆರೆಯ ವಿವಿಧ ಬ್ಯಾಂಕ್‌ಗಳಲ್ಲಿ ಸುಳ್ಳು ದಾಖಲೆಗಳನ್ನು ನೀಡಿ ಖಾತೆಗಳನ್ನು ತೆರೆದು, ಆ ಖಾತೆಗಳನ್ನು ಸೈಬರ್ ಅಪರಾಧ ಎಸಗಲು ಬಳಸಲಾಗುತ್ತಿತ್ತು. ಈ ಖಾತೆಗಳ ಮೇಲೆ ಕರ್ನಾಟಕದಾದ್ಯಂತ ಒಟ್ಟು 37 ಸೈಬರ್ ಅಪರಾಧ ಪ್ರಕರಣಗಳು ವರದಿಯಾಗಿದ್ದವು. ಅಕ್ರಮವಾಗಿ ಹಣಗಳಿಸುವ ಉದ್ದೇಶದಿಂದ ಇತರ ವ್ಯಕ್ತಿಗಳೊಂದಿಗೆ ಸೇರಿ ಅಪರಾಧಿಕ ಒಳಸಂಚು ನಡೆಸಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗಗೊಂಡಿದೆ.
ಇದನ್ನೂ ಓದಿ: ಬೆಂಕಿಯಲ್ಲಿ ಹೊತ್ತಿ ಉರಿದ ಬೆಣ್ಣೆದೋಸೆ ಹೋಟೆಲ್
ಆರೋಪಿ ಪರಶುರಾಮ ವಂಚನೆಗಾಗಿಯೇ ತೆರೆದಿದ್ದ 6 ಬ್ಯಾಂಕ್ ಖಾತೆಗಳ ವಿರುದ್ಧ ದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 95 ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗಿವೆ. ಎರಡನೇ ಆರೋಪಿತ 19 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಈತ ಕೂಡ ಸೈಬರ್ ವಂಚನೆಗೆ ಸಹಕರಿಸಲು 2 ಬ್ಯಾಂಕ್ ಖಾತೆಗಳನ್ನು ಹೊಂದಿದ್ದನು. ಈತನ ವಿರುದ್ಧ ದೇಶಾದ್ಯಂತ 8 ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.























