ದಾವಣಗೆರೆ: ನಗರದ ಡೆಂಟಲ್ ಕಾಲೇಜು ರಸ್ತೆಯಲ್ಲಿರುವ ಶ್ರೀಗುರು ಕೊಟ್ಟೂರೇಶ್ವರ ಬೆಣ್ಣೆ ದೋಸೆ ಹೋಟೆಲ್‌ನಲ್ಲಿ ಶನಿವಾರ ತಡರಾತ್ರಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ. ಹೋಟೆಲ್‌ನ ಕೆಲವು ಭಾಗಗಳು ಬೆಂಕಿಗಾಹುತಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಹೋಟೆಲ್ ಸಿಬ್ಬಂದಿ ಕೆಲಸ ಮುಗಿದ ನಂತರ ಒಲೆಯಲ್ಲಿದ್ದ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸದೆ ತೆರಳಿದ್ದರು ಎನ್ನಲಾಗಿದೆ. ಇದರಿಂದ ಒಲೆಯ ಪಕ್ಕದಲ್ಲಿದ್ದ ಸೌದೆಗೆ ಬೆಂಕಿ ತಗುಲಿ ಇಡೀ ಹೋಟೆಲ್‌ಗೆ ವ್ಯಾಪಿಸಿದೆ. ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ಗಮನಿಸಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಸುತ್ತಮುತ್ತಲಿನ ಕಟ್ಟಡಗಳಿಗೆ ಬೆಂಕಿ ಹರಡುವುದು ತಪ್ಪಿದ್ದು, ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.
ಇದನ್ನೂ ಓದಿ: ಅಬ್ಬಾ…! ಒಂದೇ ಮನೆಯಲ್ಲಿ ಬರೋಬ್ಬರಿ ಆರು ಹೆಬ್ಬಾವು ಪ್ರತ್ಯಕ್ಷ
ಘಟನಾ ಸ್ಥಳಕ್ಕೆ ಬಡಾವಣೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೋಟೆಲ್‌ನ ಪೀಠೋಪಕರಣ ಹಾಗೂ ಕೆಲವು ಸಾಮಗ್ರಿಗಳು ಸುಟ್ಟು ಕರಕಲಾಗಿದ್ದು, ಹಾನಿಯ ಅಂದಾಜು ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.






















