ಬೆಂಗಳೂರು: ಉಡುಪ ಪ್ರತಿಷ್ಠಾನದ ದಶಮಾನೋತ್ಸವ ಅಂಗವಾಗಿ ರಾಜಧಾನಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ 3 ದಿನಗಳ ‘ಉಡುಪ ಸಂಗೀತೋತ್ಸವ’ಕ್ಕೆ ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಭವನದಲ್ಲಿ ಶುಕ್ರವಾರ ವಿಧ್ಯುಕ್ತ ಚಾಲನೆ ದೊರಕಿತು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಖ್ಯಾತಿ ಪಡೆದಿರುವ ಹಿಂದೂಸ್ತಾನಿ ಗಾಯಕಿ ಬೇಗಂ ಪರ್ವೀನ್ ಸುಲ್ತಾನಾ ಅವರ ರಂಜನೀಯ ಗಾನಸುಧೆ ‘ಉಡುಪ ಸಂಗೀತೋತ್ಸವ’ ಕ್ಕೆ ಮುನ್ನುಡಿ ಬರೆಯುವಲ್ಲಿ ಯಶವಾಯಿತು.
ನೂರಾರು ಪ್ರೇಕ್ಷಕರ ಕರ ತಾಡನದ ನಡುವೆ ವಿವಿಧ ರಾಗಗಳನ್ನು ಆಲಾಪಿಸಿದ ಸುಲ್ತಾನಾ ಅವರು, ಬಹು ಬೇಗನೆ ಎಲ್ಲರ ಮನ ಸೆಳೆಯುವಲ್ಲಿ ಸಫಲರಾದರು. ಪಂಡಿತ್ ಡಾ. ರವೀಂದ್ರ ಕಾಟೋಟಿ ಅವರ ಹಾರ್ಮೋನಿಯಂ ಮತ್ತು ಓಜಸ್ ಆದ್ಯ ಅವರ ತಬಲಾ ಪಕ್ಕವಾದ್ಯ ಸಾಥ್ ಸುಲ್ತಾನಾ ಅವರ ಕಛೇರಿಯ ರಂಗು ಹೆಚ್ಚಿಸುವಲ್ಲಿ ಯಶವಾಯಿತು.
ಇದನ್ನೂ ಓದಿ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಎಸ್ಪಿಗೆ ಗಾಯ
ನಂತರ ಪುರ್ಬಯನ್ ಚಟರ್ಜಿ ಅವರ ಸಿತಾರ್ ವಾದನ ಮನ ಮೋಹಕವಾಗಿತ್ತು. ಓಜಸ್ ಆದ್ಯ ಅವರ ತಬಲಾ ಸಹಕಾರ ಅಮೋಘವಾಗಿತ್ತು. ಉಡುಪ ಪ್ರತಿಷ್ಠಾನದ ಟ್ರಸ್ಟಿ ವಿದ್ವಾನ್ ಗಿರಿಧರ ಉಡುಪ ನೇತೃತ್ವ ವಹಿಸಿದ್ದರು. ಸಂಧ್ಯಾ ಉಡುಪ ಮತ್ತು ಕಲಾವಿದರು ಹಾಜರಿದ್ದರು.
ತಾಳವಾದ್ಯ ಕಛೇರಿ: ಫೆ. 21ರ ಸಂಜೆ 6ಕ್ಕೆ ತಾಳವಾದ್ಯ ಕಛೇರಿ ಆಯೋಜನೆಗೊಂಡಿದೆ. ಪದ್ಮಶ್ರೀ ಪುರಸ್ಕೃತ ವಿದ್ವಾನ್ ತಿರುವಾಯೂರು ಭಕ್ತವತ್ಸಲಂ (ಮೃಗಂಗ) ನವೀನ್ ಶರ್ಮಾ (ಢೋಲಕ್) ಮತ್ತು ವಿಜಯ ಶ್ಯಾಮರಾವ್ ಚವ್ಹಾಣ್ (ಡೋಲ್ಕಿ) ವಾದನದಲ್ಲಿ ಶ್ರೋತೃಗಳ ಮನಸೂರೆಗೊಳ್ಳಲಿದ್ದಾರೆ. ನಂತರ ಪದ್ಮಶ್ರೀ ಗೌರವಕ್ಕೆ ಭಾಜನರಾದ ವಿದುಷಿಯರಾದ ರಂಜನಿ ಮತ್ತು ಗಾಯತ್ರಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ವಿಜೃಂಭಿಸಲಿದೆ. ಪಕ್ಕವಾದ್ಯದಲ್ಲಿ ವಿದುಷಿ ಚಾರುಮತಿ ರಘುರಾಮನ್ ಪಿಟೀಲು, ವಿದ್ವಾನ್ ಸಾಯಿ ಗಿರಿಧರ ಮೃದಂಗ ಮತ್ತು ವಿದ್ವಾನ್ ವಾಝಪಲ್ಲಿ ಆರ್. ಕೃಷ್ಣಕುಮಾರ್ ಘಟಂ ಸಹಕಾರ ನೀಡಲಿದ್ದಾರೆ.
ಇದನ್ನೂ ಓದಿ: ಯುವ ವಿಜ್ಞಾನಿ ಕಾರ್ಯಕ್ರಮ ಘೋಷಿಸಿದ ISRO – ಬಾಹ್ಯಾಕಾಶ ವಿಜ್ಞಾನ ಕಲಿಯಲು ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ
ಭಾನುವಾರದ ಕಾರ್ಯಕ್ರಮ: ಫೆ. 22ರ ಸಂಜೆ 7ಕ್ಕೆ ಪಂಡಿತ್ ವಿಶ್ವಮೋಹನ ಭಟ್ ಅವರ ಮೋಹನ ವೀಣಾವಾದನವಿದೆ. ವಿವಿಧ ವಾದ್ಯಗಳ ಲಹರಿಗಳು ಮೇಳೈಸಲಿವೆ. ವಿದ್ವಾಂಸರಾದ ಶಶಾಂಕ ಸುಬ್ರಹ್ಮಣ್ಯ (ಕೊಳಲು), ವಿದ್ವಾನ್ ಹರೀಶ ಶಿವರಾಮ ಕೃಷ್ಣನ್ (ಗಾಯನ), ದರ್ಶನ್ ದೋಷಿ (ಡ್ರಮ್ಸ್),ಶೆಲ್ಡನ್ ಡಿಸಿಲ್ವಾ (ಬಾಸ್ ಗಿಟಾರ್), ಮಂಜುನಾಥ ಸತ್ಯಶೀಲ್ (ಡ್ರಮ್ಸ್- ಪರ್ಕೂಶನ್ಸ್), ರಾಹುಲ್ ವಾಡ್ವಾಣಿ ಕೋ ಬೋರ್ಡ್ ಮತ್ತು ಹಿಮಾಂಶು ಮಹಾಂತ ಅವರು ತಬಲಾ ವಾದನ ಅನುರಣಿಸಲಿದೆ ಎಂದು ಪ್ರತಿಷ್ಠಾನದ ಟ್ರಸ್ಟಿ ವಿದ್ವಾನ್ ಗಿರಿಧರ ಉಡುಪ ತಿಳಿಸಿದ್ದಾರೆ.























