ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಜನರ ಆರಾಧ್ಯ ದೈವ ಶ್ರೀ ಸಿದ್ಧಾರೂಢ ಸ್ವಾಮಿ ಹಾಗೂ ಶ್ರೀ ಗುರುನಾಥಾರೂಢ ಸ್ವಾಮೀಜಿಗಳ ರಥೋತ್ಸವ ಲಕ್ಷಾಂತರ ಭಕ್ತರ ಹರ್ಷೋದ್ವಾರದ ನಡುವೆ ಸೋಮವಾರ ವೈಭವದಿಂದ ನಡೆಯಿತು.
ತೇರು ಮುಂದೆ ಸಾಗುತ್ತಿದ್ದಂತೆ ಓಂ ನಮಃ ಶಿವಾಯ, ಹರ ಹರ ಮಹಾದೇವ ಎಂಬ ಜಯಘೋಷ ಭಕ್ತರಿಂದ ಮೊಳಗಿದವು. ಶ್ರೀಮಠದ ಮುಖ್ಯ ಆಡಳಿತಾಧಿಕಾರಿ ಹಾಗೂ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್. ಭಾರತಿ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು.
ಸಂಜೆ 5.30 ಕ್ಕೆ ಸಲ್ಲುವ ಶುಭಮುಹೂರ್ತದಲ್ಲಿ ಸಿದ್ಧಾರೂಢ ಹಾಗೂ ಗುರುನಾಥಾರೂಢರ ಉತ್ಸವ ಮೂರ್ತಿಗಳನ್ನು ಅಲಂಕೃತ ರಥದಲ್ಲಿರಿಸಿ ಎಳೆಯಲಾಯಿತು. ಜಾತಿ, ಧರ್ಮದ ಸಂಕೋಲೆಗಳನ್ನು ಮೀರಿ ಸರ್ವ ಜನಾಂಗದವರು ರಥೋತ್ಸವದಲ್ಲಿ ಭಾಗಿಯಾಗಿದರು.
ಇದನ್ನೂ ಓದಿ: ಶಬರಿಮಲೆ ಮಹಿಳೆಯರ ಪ್ರವೇಶ: ಏ. 7ರಿಂದ ಅಂತಿಮ ವಿಚಾರಣೆ
ಶ್ರೀ ಸಿದ್ಧಾರೂಢರ ರಥ, ಮಠದ ಮುಖ್ಯ ಬೀದಿಯಲ್ಲಿ ಸಾಗುತ್ತಿದ್ದಂತೆಯೇ ಭಕ್ತರು ಉತ್ತತ್ತಿ, ಬಾಳೆಹಣ್ಣು, ನಿಂಬೆಹಣ್ಣು ಸಮರ್ಪಿಸಿ ಭಕ್ತಿ ಮೆರೆದರು. ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನಸಾಗರ ರಥೋತ್ಸವ ಕಣ್ತುಂಬಿಕೊಂಡಿತು.
ಡೊಳ್ಳು, ಬ್ಯಾಂಜೋ, ಜಾಂಜ್ ಮೇಳ ಸೇರಿದಂತೆ ವಿವಿಧ ವಾದ್ಯ – ಮೇಳಗಳೊಂದಿಗೆ ರಥ ಸಾಗಿತು. ಯುವ ಸಮೂಹ ನೃತ್ಯ ಮಾಡುವ ಮೂಲಕ ಜಾತ್ರೆಯ ಸಂಭ್ರಮವನ್ನು ಇಮ್ಮಡಿಗೊಳಿಸಿತು.























