ಧಾರವಾಡ: ಕಳೆದ ಕೆಲ ದಿನಗಳ ಹಿಂದಷ್ಟೇ ಧಾರವಾಡದ ಹೈಕೋರ್ಟ್ ಪೀಠಕ್ಕೆ ಬಾಂಬ್ ಬೆದರಿಕೆ ಮೇಲ್ ಬಂದು ಅದು ಸುಳ್ಳು ಎನ್ನುವಷ್ಟರಲ್ಲಿಯೇ ಸೋಮವಾರ ಪುನಃ ಬಾಂಬ್ ಬೆದರಿಕೆ ಸಂದೇಶ ಬಂದಿರುವುದು ನ್ಯಾಯಾಲಯದ ಸಿಬ್ಬಂದಿ ಮತ್ತು ಜನರನ್ನು ವಿಚಲಿತಗೊಳಿಸಿದೆ.
ಸೋಮವಾರ ಬೆಳಿಗ್ಗೆ ಹೈಕೋರ್ಟ್ ಪೀಠಕ್ಕೆ ಕೋರ್ಟ್ ಸಿಬ್ಬಂದಿ, ವಕೀಲರು ಹಾಜರಾಗಿದ್ದರು. ಆದರೆ, ಕೋರ್ಟ್‌ಗೆ ಇ-ಮೇಲ್ ಬಾಂಬ್ ಬೆದರಿಕೆ ಸಂದೇಶ ಬಂದ ನಂತರ ಈ ವಿಷಯವನ್ನು ಪೊಲೀಸರ ಗಮನಕ್ಕೆ ತರಲಾಯಿತು. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಕೋರ್ಟ್‌ನಲ್ಲಿನ ಎಲ್ಲಾ ಸಿಬ್ಬಂದಿ ಹಾಗೂ ವಕೀಲರನ್ನು ಹೊರ ಹಾಕಿ ತಪಾಸಣೆ ನಡೆಸಿದ್ದಾರೆ. ಸ್ಥಳಕ್ಕೆ ಎಸ್‌ಪಿ ಗುಂಜನ್ ಆರ್ಯ, ಅಗ್ನಿಶಾಮಕ ದಳ, ಶ್ವಾನದಳ ಹಾಗೂ ಬಾಂಬ್ ನಿಷ್ಕ್ರೀಯದಳದವರೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸದ್ಯ ಹೈಕೋರ್ಟ್‌ನಲ್ಲಿನ ಸಿಬ್ಬಂದಿಯನ್ನು ಹೊರ ಹಾಕಿದ್ದು, ಪೊಲೀಸರು ಒಳಗಡೆ ಕಟ್ಟುನಿಟ್ಟಾಗಿ ತಪಾಸಣೆ ನಡೆಸಿದ್ದಾರೆ. ಮಧ್ಯಾಹ್ನ 1-15ಕ್ಕೆ ಬಾಂಬ್ ಬ್ಲಾಸ್ಟ್ ಮಾಡುತ್ತೇವೆ ಎಂದು ಇ-ಮೇಲ್ ಸಂದೇಶದಲ್ಲಿ ಬರೆಯಲಾಗಿದೆ.
ಎರಡನೇ ಬಾರಿ ಹೈಕೋರ್ಟ್ ಪೀಠಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಕೋರ್ಟ್‌ಗೆ ಬಿಗಿ ಬಂದೋಬಸ್ತ್ ಒದಗಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರೂ ಸರ್ಕಾರ ಮಾತ್ರ ಖುರ್ಚಿಗಾಗಿ ಬಡಿದಾಡುತ್ತಿದೆ. ಸರ್ಕಾರ ಈ ಗಂಭೀರತೆಯನ್ನು ಅರಿಯದಿದ್ದರೆ ವಿಧಾನಸೌಧದ ಎದುರು ಉಪವಾಸ ಸತ್ಯಾಗ್ರಹ ಕೈಗೊಳ್ಳಬೇಕಾಗುತ್ತದೆ ಎಂದು ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಬಿ.ಡಿ. ಹಿರೇಮಠ ಎಚ್ಚರಿಸಿದರು.






















