Home Advertisement
Home ನಮ್ಮ ಜಿಲ್ಲೆ ದಾವಣಗೆರೆ ದಾವಣಗೆರೆ: ಕಸ ವಿಂಗಡನೆಗೆ ಸೂಚಿಸಿದ ಪೌರ ಕಾರ್ಮಿಕನ ಮೇಲೆ ಹಲ್ಲೆ

ದಾವಣಗೆರೆ: ಕಸ ವಿಂಗಡನೆಗೆ ಸೂಚಿಸಿದ ಪೌರ ಕಾರ್ಮಿಕನ ಮೇಲೆ ಹಲ್ಲೆ

0
69

ಪೌರ ಕಾರ್ಮಿಕರ ಸುರಕ್ಷತೆಗೆ ಒತ್ತಾಯ: ಅಜಾದ್ ನಗರ ಠಾಣೆ ಮುಂದೆ ಧರಣಿ

ದಾವಣಗೆರೆ: ನಗರದ ಮೆಹಬೂಬ್ ನಗರ ಪ್ರದೇಶದಲ್ಲಿ ಕಸವನ್ನು ವಿಂಗಡಿಸಿ ವಾಹನಕ್ಕೆ ಹಾಕುವಂತೆ ಸೂಚಿಸಿದ ಪೌರ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಕರಿಬಸಪ್ಪ ಎಂಬ ಪೌರ ಕಾರ್ಮಿಕ ಹಾಗೂ ವಾಹನ ಚಾಲಕ ಹಲ್ಲೆಗೆ ಒಳಗಾಗಿದ್ದಾರೆ.

ಬೆಳಿಗ್ಗೆ ದಿನನಿತ್ಯದಂತೆ ಕಸ ಸಂಗ್ರಹಕ್ಕಾಗಿ ಗಾಡಿ ತೆಗೆದುಕೊಂಡು ತೆರಳಿದ್ದ ವೇಳೆ, ಮನೆಯೊಂದರ ಮುಂದೆ ಮಗು ಬಳಸಿದ ಡೈಪರ್‌ನ್ನು ಪ್ರತ್ಯೇಕ ಕವರ್‌ನಲ್ಲಿ ಹಾಕುವಂತೆ ಕರಿಬಸಪ್ಪ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಕೋಪಗೊಂಡ ಕೆಲವರು ಗಲಾಟೆ ಆರಂಭಿಸಿ, ಬಳಿಕ ಗುಂಪಾಗಿ ಬಂದು ರೌಡಿಗಳಂತೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಜೋಸೈಮನ್ ನಿಧನ

ಪೌರಕಾರ್ಮಿಕರ ಆಕ್ರೋಶ, ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ: ಹಲ್ಲೆ ಘಟನೆಯನ್ನು ಖಂಡಿಸಿ ಪೌರ ಕಾರ್ಮಿಕರು ಅಜಾದ್ ನಗರ ಪೊಲೀಸ್ ಠಾಣೆ ಮುಂಭಾಗ ಜಮಾಯಿಸಿ ಪ್ರತಿಭಟನೆ ನಡೆಸಿದರು. ಕಸ ಸಾಗಿಸುವ ಆಟೋ ವಾಹನಗಳನ್ನು ಠಾಣೆ ಮುಂದೆ ನಿಲ್ಲಿಸಿ, ಆರೋಪಿಗಳನ್ನು ತಕ್ಷಣ ಬಂಧಿಸುವವರೆಗೂ ಸ್ಥಳದಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದರು. ಪ್ರತಿಭಟನಾಕಾರರು, “ನಗರವನ್ನು ಸ್ವಚ್ಛವಾಗಿಡಲು ದುಡಿಯುವ ನಮ್ಮ ಮೇಲೆಯೇ ಪದೇ ಪದೇ ಹಲ್ಲೆ ನಡೆಯುತ್ತಿದೆ. ನಮಗೆ ಯಾವುದೇ ಭದ್ರತೆ ಇಲ್ಲದಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಯದ ವಾತಾವರಣ ನಿರ್ಮಾಣ: ಪೌರಕಾರ್ಮಿಕರ ಪ್ರಕಾರ, ಮೆಹಬೂಬ್ ನಗರ, ಅಜಾದ್ ನಗರ, ಶಿವನಗರ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಕೆಲಸ ಮಾಡಲು ಭಯದ ವಾತಾವರಣ ನಿರ್ಮಾಣವಾಗಿದೆ. ಕೆಲ ವ್ಯಕ್ತಿಗಳು ಪದೇ ಪದೇ ದೌರ್ಜನ್ಯ ನಡೆಸುತ್ತಿರುವುದರಿಂದ ತಮ್ಮ ಕರ್ತವ್ಯ ನಿರ್ವಹಣೆ ಕಷ್ಟಕರವಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಾವು ಸಾರ್ವಜನಿಕ ಆರೋಗ್ಯಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಆದರೆ ನಮ್ಮ ಮೇಲೆ ಹಲ್ಲೆ ನಡೆಸುವುದು ನಿತ್ಯದಂತಾಗಿದೆ. ಸರ್ಕಾರ ಹಾಗೂ ಪೊಲೀಸ್ ಇಲಾಖೆ ನಮಗೆ ರಕ್ಷಣೆ ನೀಡಬೇಕು” ಎಂದು ಪೌರ ಕಾರ್ಮಿಕರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: 76 ವರ್ಷಗಳ ಬಳಿಕ ಸ್ಥಳಾಂತರ: ‘ಸೇವಾ ತೀರ್ಥ’ಕ್ಕೆ PMO ಶಿಫ್ಟ್

ಪ್ರಕರಣ ದಾಖಲು, ತನಿಖೆ ಆರಂಭ: ಘಟನೆ ಸಂಬಂಧ ಅಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಲಾಗಿದೆ. ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಈ ಘಟನೆಯಿಂದ ನಗರದಲ್ಲಿ ಪೌರ ಕಾರ್ಮಿಕರ ಸುರಕ್ಷತೆ ಕುರಿತು ಮತ್ತೆ ಚರ್ಚೆ ಆರಂಭವಾಗಿದ್ದು, ಅವರಿಗೆ ಸೂಕ್ತ ರಕ್ಷಣೆ ಒದಗಿಸುವ ಅಗತ್ಯವಿದೆ ಎಂಬ ಒತ್ತಾಯ ಕೇಳಿಬರುತ್ತಿದೆ.

Previous articleಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಜೋಸೈಮನ್ ನಿಧನ
Next articleಬಿಜೆಪಿಯ ಸುಳ್ಳಿನ ಫ್ಯಾಕ್ಟರಿಯ ಮತ್ತೊಂದು ವಿಫಲ ಹುನ್ನಾರ