ಬಳ್ಳಾರಿ: ಕೇರಳದ ಅಯ್ಯಪ್ಪ ಸ್ವಾಮಿ ಬಂಗಾರ ಕಳವು ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಕೇರಳ ವಿಶೇಷ ತನಿಖಾ ತಂಡ (ಎಸ್‌ಐಟಿ) ಮತ್ತೆ ಬಳ್ಳಾರಿಗೆ ಆಗಮಿಸಿ ಮಹತ್ವದ ತನಿಖೆ ಕೈಗೊಂಡಿದೆ.
ನಗರದ ಪಾರ್ವತಿ ನಗರದಲ್ಲಿರುವ ಗೋವರ್ಧನ ಅವರ ನಿವಾಸಕ್ಕೆ ಭೇಟಿ ನೀಡಿದ ಎಸ್‌ಐಟಿ ತಂಡ, ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ದಾಖಲೆಗಳನ್ನು ವಶ ಪಡಿಸಿಕೊಂಡಿದೆ. ಗೋವರ್ಧನ ಅವರು ತಮ್ಮ ಮನೆಯಲ್ಲಿ ಹೊಸದಾಗಿ ನಿರ್ಮಿಸಿರುವ ದ್ವಾರ ಬಾಗಿಲಿನ ಕುರಿತಂತೆ ಕೂಡ ತನಿಖಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಕೆನಡಾ ಶೂಟೌಟ್ ಪ್ರಕರಣ: ಕನ್ನಡಿಗ ಚಂದನ್ ಕುಮಾರ್ ಪಾರ್ಥಿವ ಶರೀರ ಭಾರತಕ್ಕೆ
ತನಿಖೆಯ ಭಾಗವಾಗಿ ಗೋವರ್ಧನ ಅವರಿಗೆ ಸಂಬಂಧಿಸಿದ ವೈಯಕ್ತಿಕ ಬ್ಯಾಂಕ್ ಪಾಸ್‌ಬುಕ್, ಚೆಕ್ ಬುಕ್ ಹಾಗೂ ಇತರ ಹಣಕಾಸು ದಾಖಲೆಗಳನ್ನು ಎಸ್‌ಐಟಿ ತಂಡ ವಶಕ್ಕೆ ಪಡೆದಿದೆ. ಜೊತೆಗೆ ಅವರ ಮಾಲೀಕತ್ವದ ‘ರೊದ್ದಂ ಜ್ಯೂವೆಲರ್ಸ್’ ಸಂಸ್ಥೆಯ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಅಕೌಂಟ್ ಪುಸ್ತಕಗಳನ್ನೂ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ.
ಕೇರಳದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಸಂಬಂಧಿಸಿದ ಬಂಗಾರ ಕಳವು ಪ್ರಕರಣವು ರಾಜ್ಯಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಈ ಪ್ರಕರಣದ ಬೇರುಗಳು ಬಳ್ಳಾರಿಗೂ ವಿಸ್ತರಿಸಿರುವ ಶಂಕೆಯ ಮೇರೆಗೆ ಎಸ್‌ಐಟಿ ತಂಡ ಪುನಃ ನಗರಕ್ಕೆ ಆಗಮಿಸಿದೆ ಎನ್ನಲಾಗಿದೆ.
ಇದನ್ನೂ ಓದಿ: ರಾಹುಲ್ ವಿರುದ್ಧ ನಿರ್ಣಯಕ್ಕೆ ಬ್ರೇಕ್: ಸಮಿತಿಗೆ ಒಪ್ಪಿಸುವ ಸಾಧ್ಯತೆ
ಗೋವರ್ಧನ ಅವರ ಹಣಕಾಸು ವ್ಯವಹಾರಗಳು, ಬ್ಯಾಂಕ್ ಲೆನ್ದೆನಗಳು ಹಾಗೂ ಆಭರಣ ವ್ಯಾಪಾರದ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಮೂಲಕ ಪ್ರಕರಣದ ಹಿನ್ನಲೆಯಲ್ಲಿ ಇರುವ ಜಾಲವನ್ನು ಪತ್ತೆಹಚ್ಚಲು ತನಿಖಾಧಿಕಾರಿಗಳು ಮುಂದಾಗಿದ್ದಾರೆ.
ಈ ಕುರಿತು ಅಧಿಕೃತವಾಗಿ ಎಸ್‌ಐಟಿ ತಂಡ ಇನ್ನೂ ಯಾವುದೇ ಮಾಹಿತಿ ಬಹಿರಂಗಪಡಿಸದಿದ್ದರೂ, ಮುಂದಿನ ದಿನಗಳಲ್ಲಿ ಮತ್ತಷ್ಟು ವಿಚಾರಣೆ ಹಾಗೂ ದಾಖಲೆ ಸಂಗ್ರಹ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.






















