Home Advertisement
Home ನಮ್ಮ ಜಿಲ್ಲೆ ಬೆಂಗಳೂರು ಬೆಂಗಳೂರು–ವಿಜಯಪುರ ವಂದೇ ಭಾರತ್, ಹೈಸ್ಪೀಡ್ ಕಾರಿಡಾರ್‌ಗೆ ಎಂ.ಬಿ. ಪಾಟೀಲ್ ಮನವಿ

ಬೆಂಗಳೂರು–ವಿಜಯಪುರ ವಂದೇ ಭಾರತ್, ಹೈಸ್ಪೀಡ್ ಕಾರಿಡಾರ್‌ಗೆ ಎಂ.ಬಿ. ಪಾಟೀಲ್ ಮನವಿ

0
69

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಮತ್ತು ವಿಜಯಪುರ ನಡುವೆ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲು, ಬೆಂಗಳೂರು–ಮುಂಬೈ ನಡುವೆ ಹೈಸ್ಪೀಡ್ ರೈಲು ಕಾರಿಡಾರ್, ಹಾಗೂ ಬೆಂಗಳೂರು–ವಿಜಯಪುರ ನಡುವೆ ದಿನವಹಿ ವಿಶೇಷ ರೈಲು ಸೇವೆಗಳನ್ನು ಮಂಜೂರು ಮಾಡಬೇಕೆಂದು ರಾಜ್ಯ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಖುದ್ದಾಗಿ ಮನವಿ ಸಲ್ಲಿಸಿದ್ದಾರೆ.

ಬಾಗಲೂರಿನ ಹೈಟೆಕ್ ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್‌ವರ್ಕ್ ಸಂಸ್ಥೆಯ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ ಬಳಿಕ ಸಚಿವರು ರೈಲ್ವೆ ಸಚಿವರನ್ನು ಭೇಟಿಯಾಗಿ ಈ ಸಂಬಂಧ ಮನವಿ ಪತ್ರಗಳನ್ನು ನೀಡಿದ್ದಾರೆ. ಈ ಮನವಿಗಳಿಗೆ ರೈಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ, ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ:  `ಗೃಹಲಕ್ಷ್ಮಿ’ ಫಲಾನುಭವಿಗಳಿಗೆ ಜೀವಿತ ಪ್ರಮಾಣಪತ್ರಕ್ಕೆ ಸೂಚನೆ

ಬೆಂಗಳೂರು ದೇಶದ ತಂತ್ರಜ್ಞಾನ ರಾಜಧಾನಿಯಾಗಿದ್ದು, ಮುಂಬೈ ಆರ್ಥಿಕ ರಾಜಧಾನಿಯಾಗಿರುವುದರಿಂದ, ಈ ಎರಡು ನಗರಗಳ ನಡುವೆ ಅತ್ಯುತ್ತಮ ಸಂಪರ್ಕ ವ್ಯವಸ್ಥೆ ಅಗತ್ಯವಾಗಿದೆ. ಈಗಾಗಲೇ ಘೋಷಿತ ಮುಂಬೈ–ಪುಣೆ ಹೈಸ್ಪೀಡ್ ರೈಲು ಕಾರಿಡಾರ್ ಅನ್ನು ಬೆಂಗಳೂರಿನವರೆಗೆ ವಿಸ್ತರಿಸಬೇಕೆಂದು ಎಂ.ಬಿ. ಪಾಟೀಲ್ ಮನವಿ ಮಾಡಿದ್ದಾರೆ. ಇದಕ್ಕೂ ಕೇಂದ್ರ ಸಚಿವರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಯಾಣ ಸಮಯ ಕಡಿತಕ್ಕೆ ಬೇಡಿಕೆ: ಬೆಂಗಳೂರು ಮತ್ತು ವಿಜಯಪುರ ನಡುವಿನ ದೂರ ಸುಮಾರು 530 ಕಿಲೋಮೀಟರ್ ಆಗಿದ್ದು, ಪ್ರಸ್ತುತ ರೈಲು ಪ್ರಯಾಣಕ್ಕೆ 15ರಿಂದ 16 ಗಂಟೆಗಳವರೆಗೆ ಸಮಯ ತೆಗೆದುಕೊಳ್ಳುತ್ತಿದೆ. ಇದನ್ನು 10 ಗಂಟೆಗೆ ಇಳಿಸಲು ಕ್ರಮ ಕೈಗೊಳ್ಳಬೇಕೆಂದು ಸಚಿವರು ಮನವಿ ಮಾಡಿದ್ದಾರೆ. ಈ ಉದ್ದೇಶಕ್ಕಾಗಿ ಬೆಂಗಳೂರು–ಹುಬ್ಬಳ್ಳಿ ನಡುವೆ ನಿಯಮಿತ ನಿಲುಗಡೆಗಳನ್ನು ಮಾತ್ರ ನೀಡುವಂತೆ ಹಾಗೂ ಹುಬ್ಬಳ್ಳಿ–ಗದಗ ಬೈಪಾಸ್ ಮಾರ್ಗದಲ್ಲಿ ರೈಲು ಸಂಚಾರ ನಡೆಸುವಂತೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಸರ್ಕಾರದ ಗ್ಯಾರಂಟಿಗಳು ಜನರ ಉಳಿತಾಯಕ್ಕೆ ನೆರವಾಗಿವೆ 

ಅದೇ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭಿಸುವಂತೆ ಹಾಗೂ ದಿನನಿತ್ಯ ವಿಶೇಷ ರೈಲು ಸೇವೆ ಒದಗಿಸುವಂತೆ ಕೂಡ ಬೇಡಿಕೆ ಇಡಲಾಗಿದೆ.

ಮಧ್ಯ–ಉತ್ತರ ಕರ್ನಾಟಕಕ್ಕೆ ಲಾಭ: ಈ ಮೂರು ಬಗೆಯ ರೈಲು ಸೇವೆಗಳ ಮೂಲಕ ಮಧ್ಯ ಮತ್ತು ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ಸಾಮಾಜಿಕ, ಕೈಗಾರಿಕಾ ಹಾಗೂ ಆರ್ಥಿಕವಾಗಿ ಮಹತ್ತರ ಲಾಭವಾಗಲಿದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಉದ್ಯೋಗ, ವ್ಯಾಪಾರ, ಪ್ರವಾಸೋದ್ಯಮ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಇದರಿಂದ ಉತ್ತೇಜನ ದೊರೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ನೈರುತ್ಯ ರೈಲ್ವೆ ಮುಖ್ಯ ಆಡಳಿತಾಧಿಕಾರಿ ಅಜಯ್ ಶರ್ಮ ಸೇರಿದಂತೆ ಹಲವು ಹಿರಿಯ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು. ರೈಲ್ವೆ ಸಚಿವರ ಸಕಾರಾತ್ಮಕ ಸ್ಪಂದನೆಯಿಂದಾಗಿ, ಮುಂದಿನ ದಿನಗಳಲ್ಲಿ ಕರ್ನಾಟಕಕ್ಕೆ ಹೊಸ ರೈಲು ಸಂಪರ್ಕ ಸೌಲಭ್ಯಗಳು ಲಭಿಸುವ ನಿರೀಕ್ಷೆ ಮೂಡಿದೆ.

Previous articleT20 World Cup: ಭಾರತಕ್ಕೆ ಗೆಲುವಿನ ಸೂರ್ಯೋದಯ
Next article5 ಸಾವಿರ ವರ್ಷಗಳ ಹಿಂದಿನ ಮಾನವನ ಪಳೆಯುಳಿಕೆ ಪತ್ತೆ