Home Advertisement
Home ತಾಜಾ ಸುದ್ದಿ ಸಿಎಂ ಪೊಲೀಸ್ ಅಧಿಕಾರಿಯನ್ನು ಕೀಳಾಗಿ ನಡೆಸಿಕೊಂಡಿಲ್ಲ

ಸಿಎಂ ಪೊಲೀಸ್ ಅಧಿಕಾರಿಯನ್ನು ಕೀಳಾಗಿ ನಡೆಸಿಕೊಂಡಿಲ್ಲ

0
129

ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿಯನ್ನು ಕೀಳಾಗಿ ನಡೆಸಿಕೊಂಡಿಲ್ಲ. ಒಂದು ಕ್ಷಣದಲ್ಲಿ ನಡೆದ ಘಟನೆ ಇದು. ಇದನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಬಿಜೆಪಿಯ ಕಾರ್ಯಕರ್ತೆಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಮುಖ್ಯಮಂತ್ರಿಗಳ ಭಾಷಣಕ್ಕೆ ಅಡ್ಡಿಪಡಿಸಿದರು. ಇದರಿಂದ ಅವ್ಯವಸ್ಥೆ ಮತ್ತು ಗೊಂದಲ ಆಗಿರುವುದು ಕಂಡು ಸಿಟ್ಟಿಗೆದ್ದು ಮುಖ್ಯಮಂತ್ರಿಗಳು ಪೊಲೀಸರತ್ತ ಕೈ ಮಾಡಿದರೇ ವಿನಃ ಬೇರೆ ಉದ್ದೇಶವಿಲ್ಲ ಎಂದು ಇತ್ತೀಚಿಗೆ ಸಿಎಂ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ನೀಡಿದರು.
ಪಾಕಿಸ್ತಾನ ವಿರುದ್ಧ ಕೇಂದ್ರ ಸರ್ಕಾರ ಯಾವುದೇ ನಿಲುವುಗಳನ್ನು ತೆಗೆದುಕೊಂಡರೂ, ಅದಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಹೇಳಿದ್ದಾರೆ. ಯಾರನ್ನೂ ಓಲೈಕೆ ಮಾಡುವ ಪ್ರಶ್ನೆ ಇಲ್ಲ. ಸಿಎಂ ಹೇಳಿಕೆ ಬಗ್ಗೆ ಬಿಜೆಪಿಯವರೇ ತಪ್ಪಾಗಿ ಅರ್ಥೈಸಿಕೊಂಡು ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದರು.
ಏಷ್ಯಾ ಖಂಡದಲ್ಲೇ ಎರಡನೇ ಅತಿದೊಡ್ಡ ಸೂಳೆಕೆರೆಗೆ ಉಪಲೋಕಾಯುಕ್ತ ಬಿ.ವೀರಪ್ಪ ಭೇಟಿ ನೀಡಿದ ವೇಳೆ ಸೂಳೆಕೆರೆ ಒತ್ತುವರಿ ಬಗ್ಗೆ ಮಾತನಾಡಿದ್ದಾರೆ ಎಂಬ ಪ್ರಶ್ನೆಗೆ, ನನ್ನ ಕ್ಷೇತ್ರದ ವ್ಯಾಪ್ತಿಯ ಸೂಳೆಕೆರೆ ಒಂದೇ ಒತ್ತುವರಿಯಾಗಿಲ್ಲ, ಸಾಕಷ್ಟು ಕೆರೆಗಳ ಒತ್ತುವರಿಯಾಗಿವೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಕೆರೆಗಳು ರೈತರ ಜೀವನಾಡಿ. ಮಾತ್ರವಲ್ಲ, ಜನಜಾನುವಾರುಗಳಿಗೆ ಕುಡಿಯುವುದಕ್ಕೆ ನೀರು ಹಾಗೂ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಕೆರೆಗಳು ಅವಶ್ಯವಾಗಿವೆ. ಮಳೆ ಇಲ್ಲ, ನೀರು ಇಲ್ಲ ಎಂದರೆ ನೀರಿಗಾಗಿ ಯುದ್ಧ ಮಾಡಬೇಕಾದ ಸಂದರ್ಭವೂ ಬರಬಹುದು. ಕೆರೆಗಳ ಸಂರಕ್ಷಣೆ ಮಾಡಬೇಕೆಂದರೆ ಕೆೆರೆಗಳ ಒತ್ತುವರಿ ತೆರುವಿಗೆ ರೈತರು ಸಹಕಾರ ನೀಡಬೇಕು. ಅಧಿಕಾರಿಗಳು ಕೆರೆಗಳ ತೆರವುಗೊಳಿಸಲು ಕ್ರಮ ತೆಗೆದುಕೊಳ್ಳಬೇಕೆಂದರು.
ರಾಜ್ಯದ ೧೬ ಜಿಲ್ಲೆಗಳಲ್ಲಿ ಮಾದಿಗ ಸಮುದಾಯ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಮುಂತಾದ ಹೆಸರುಗಳಿಂದ ಬರೆಸಲಾಗಿದೆ. ಹೀಗಾಗಿ ಒಳಮೀಸಲಾತಿ ಜಾರಿಗೆ ಗೊಂದಲ ಉಂಟಾಗಿದೆ. ಈ ನಿಟ್ಟಿನಲ್ಲಿ ಮೇ.೫ರಿಂದ ೧೦೧ ಪರಿಶಿಷ್ಟ ಜಾತಿಯ ಸಮೀಕ್ಷೆ ಮಾಡಲಾಗುತ್ತಿದೆ. ಪ್ರತಿ ಮನೆ ಮನೆಗೆ ಭೇಟಿ ನೀಡುವಾಗ ಸಮುದಾಯದವರು ಉಪ ಜಾತಿ ‘ಮಾದಿಗ’ ಎಂದೇ ಬರೆಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರದ ಸೌಲಭ್ಯಗಳು ಕೈತಪ್ಪಲಿವೆ ಎಂದು ಎಚ್ಚರಿಕೆ ನೀಡಿದರು.

Previous articleಸಿಎಂ ಹೇಳಿಕೆ ಮಾಧ್ಯಮಗಳ ಸೃಷ್ಟಿ: ಸಿಎಂ ಪರವಾಗಿ ಬ್ಯಾಟ್‌ ಬೀಸಿದ ಚನ್ನಗಿರಿ ಶಾಸಕ
Next articleಒಂದು ರೂಪಾಯಿ ಲಂಚ ಪಡೆಯದೇ ಗ್ರಾಮ ಆಡಳಿತಾಧಿಕಾರಿಗಳ ನೇಮಕ