SK Home Ad
Home ಸುದ್ದಿ ದೇಶ ವಿವಾದದ ನಡುವೆಯೇ ಬೆಟ್ಟದ ದೀಪಸ್ತಂಭದಲ್ಲಿ ಬೆಳಗಿದ ಜ್ಯೋತಿ

ವಿವಾದದ ನಡುವೆಯೇ ಬೆಟ್ಟದ ದೀಪಸ್ತಂಭದಲ್ಲಿ ಬೆಳಗಿದ ಜ್ಯೋತಿ

0
48

ಮಧುರೈ: ಸುಪ್ರೀಂ ಕೋರ್ಟ್ ನಿರ್ದೇಶನದ ಬೆನ್ನಲ್ಲೇ ತಮಿಳುನಾಡಿನ ಮಧುರೈ ಸಮೀಪದ ತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ಕಾರ್ತಿಕ ದೀಪೋತ್ಸವ ಸಂಭ್ರಮದಿಂದ ನೆರವೇರಿತು. ಬೆಟ್ಟದ ಮೇಲಿರುವ ಐತಿಹಾಸಿಕ ದೀಪತ್ತೂನ್ ಸ್ತಂಭದಲ್ಲಿ ಸಂಜೆ 5 ಗಂಟೆಗೆ ಪವಿತ್ರ ಜ್ಯೋತಿಯನ್ನು ಬೆಳಗಿಸಲಾಯಿತು. ಈ ಮೂಲಕ ದೀಪ ಬೆಳಗಿಸುವ ವಿಚಾರವಾಗಿ ಕೆಲ ದಿನಗಳಿಂದ ಸೃಷ್ಟಿಯಾಗಿದ್ದ ವಿವಾದದ ನಡುವೆಯೇ ಧಾರ್ಮಿಕ ವಿಧಿವಿಧಾನಗಳು ನಡೆದವು.

ಸುಪ್ರೀಂ ಕೋರ್ಟ್ ಆದೇಶದಂತೆ ನಡೆದ ದೀಪಾರಾಧನೆ ವೇಳೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ನ್ಯಾಯಾಂಗ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. ಅಲ್ಲದೆ, ಅನುಮತಿ ಪಡೆದ 50 ಭಕ್ತರಿಗೂ ದೀಪ ಬೆಳಗಿಸುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು.

ಬೆಟ್ಟದ ತುದಿಯಲ್ಲಿ ದೀಪ ಪ್ರಜ್ವಲಿಸುತ್ತಿದ್ದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಭಕ್ತಿಯ ವಾತಾವರಣ ನಿರ್ಮಾಣವಾಯಿತು. ದೂರದಿಂದಲೇ ದೀಪದರ್ಶನ ಪಡೆದ ಭಕ್ತರು ಮುರುಗನಿಗೆ ಜಯಘೋಷ ಮೊಳಗಿಸಿದರು. ‘ಮುರುಗನಿಗೆ ಹರೋಹರ’ ಎಂಬ ಘೋಷಣೆಗಳೊಂದಿಗೆ ಕಾರ್ತಿಕ ದೀಪೋತ್ಸವದ ಸಂಭ್ರಮ ಕಳೆಗಟ್ಟಿತು.

ಐತಿಹಾಸಿಕ ದೀಪಸ್ತಂಭದಲ್ಲಿ ಬೆಳಗಿದ ಜ್ಯೋತಿಯು ಧಾರ್ಮಿಕ ನಂಬಿಕೆ ಹಾಗೂ ಭಕ್ತಿಯ ಸಂಕೇತವಾಗಿ ಗಮನ ಸೆಳೆಯಿತು. ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ನಡೆದ ಈ ಬಾರಿಯ ದೀಪೋತ್ಸವ ವಿಶೇಷ ಮಹತ್ವ ಪಡೆದುಕೊಂಡಿತು.