SK Home Ad
Home ಸುದ್ದಿ ದೇಶ ಇಂದಿನಿಂದ ಕಾಶಿ-ತಮಿಳು ಸಂಗಮ 5.0: ಭಾಷೆಯ ಅಡೆತಡೆಯಿಲ್ಲದೆ ಕನ್ನಡದಲ್ಲೇ ವೀಕ್ಷಿಸಲು AI ಬಲ

ಇಂದಿನಿಂದ ಕಾಶಿ-ತಮಿಳು ಸಂಗಮ 5.0: ಭಾಷೆಯ ಅಡೆತಡೆಯಿಲ್ಲದೆ ಕನ್ನಡದಲ್ಲೇ ವೀಕ್ಷಿಸಲು AI ಬಲ

0
37
ಭಾಷೆಯ ಅಡೆತಡೆ ಇಲ್ಲದೆ ಕಾಶಿ-ತಮಿಳು ಸಂಗಮ ವೀಕ್ಷಿಸಿ; ಕನ್ನಡಿಗರಿಗೆ AI ತಂತ್ರಜ್ಞಾನದ ನೆರವು

ಕಾಶಿ-ತಮಿಳು ಸಂಗಮಂ 5.0 ಇಂದಿನಿಂದ ಆರಂಭ: ಭಾಷಾ ವೈವಿಧ್ಯತೆಯ ನಡುವೆ ತಂತ್ರಜ್ಞಾನದ ಸಂಪರ್ಕ – ಕನ್ನಡದಲ್ಲೂ ನೇರ ವೀಕ್ಷಣೆಗೆ ‘ಅನುವಾದಿನಿ AI’ ಸೇತುವೆ

ನವದೆಹಲಿ: ಜ್ಞಾನ, ಸಂಸ್ಕೃತಿ, ಭಾಷೆ ಮತ್ತು ಸಂಪ್ರದಾಯಗಳ ಸಂಗಮವಾದ ಐದನೇ ಆವೃತ್ತಿಯ ‘ಕಾಶಿ-ತಮಿಳು ಸಂಗಮಂ 5.0’ ಇಂದು ವಾರಾಣಸಿಯಲ್ಲಿ ಆರಂಭವಾಗುತ್ತಿದೆ. ತಮಿಳುನಾಡು ಮತ್ತು ಕಾಶಿ ನಡುವಿನ ಶತಮಾನಗಳ ಸಾಂಸ್ಕೃತಿಕ ಹಾಗೂ ನಾಗರಿಕತೆಯ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದ ಈ ರಾಷ್ಟ್ರೀಯ ಕಾರ್ಯಕ್ರಮದಲ್ಲಿ, ಭಾಷಾ ಅಡೆತಡೆ ನಿವಾರಿಸಲು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.

ವಾರಣಾಸಿಯಲ್ಲಿ “ಕಾಶಿ ಮತ್ತು ತಮಿಳುನಾಡಿನ ನಡುವೆ ಬಾಂಧವ್ಯ ಬೆಸೆಯುವ ಈ ಐತಿಹಾಸಿಕ ಸಮಾರಂಭವನ್ನು ನಮ್ಮ ಕನ್ನಡಿಗರೂ ಸಹ ‘ಅನುವಾದಿನಿ AI’ ತಂತ್ರಜ್ಞಾನದ ಮೂಲಕ ನೇರ ವೀಕ್ಷಣೆಯಲ್ಲಿ ಭಾಗಿಯಾಗಿ ಸಂಭ್ರಮಿಸಬಹುದು ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಕನ್ನಡಿಗರು ಹೇಗೆ ವೀಕ್ಷಿಸಬಹುದು?

ಭಾಷೆಯ ಅಡೆತಡೆಯಿಲ್ಲದೆ ಕಾರ್ಯಕ್ರಮವನ್ನು ಅನುಸರಿಸಲು AICTE ಅಭಿವೃದ್ಧಿಪಡಿಸಿರುವ ‘ಅನುವಾದಿನಿ AI’ ವೇದಿಕೆಯನ್ನು ಬಳಸಬಹುದು.

📲 ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಅಧಿಕೃತ ವೆಬ್‌ಸೈಟ್ ತೆರೆಯಿರಿ: https://anuvadini.aicte.gov.in/kashi (Anuvadini AI – Kashi Tamil Sangamam)

⬅ ವೆಬ್‌ಸೈಟ್‌ನಲ್ಲಿ ಲಭ್ಯವಿರುವ QR ಕೋಡ್ ಅನ್ನು ಸ್ಕ್ಯಾನ್ ಮಾಡಿ ಅಥವಾ ನೇರವಾಗಿ ಲಿಂಕ್ ತೆರೆಯಿರಿ.

ನಿಮ್ಮ ಆಯ್ಕೆಯ ಭಾಷೆಯಾಗಿ ಕನ್ನಡವನ್ನು ಆರಿಸಿಕೊಳ್ಳಿ.

ಗಣ್ಯರ ಭಾಷಣ ನಡೆಯುವಾಗ ಅದರ ಭಾಷಾಂತರವು ಪರದೆಯ ಮೇಲೆ ಪಠ್ಯ ರೂಪದಲ್ಲಿ ಮೂಡಿಬರುತ್ತದೆ.

ಈ ವ್ಯವಸ್ಥೆಯ ಮೂಲಕ ತಮಿಳು ಅಥವಾ ಇಂಗ್ಲಿಷ್ ಭಾಷೆಯ ಅರಿವು ಕಡಿಮೆ ಇರುವವರೂ ಕಾರ್ಯಕ್ರಮದ ವಿಷಯವನ್ನು ಕನ್ನಡದಲ್ಲಿಯೇ ತಿಳಿದುಕೊಳ್ಳಬಹುದು.

AI ವಿಶೇಷ ಆಕರ್ಷಣೆ: ಕಾಶಿ ಮತ್ತು ತಮಿಳುನಾಡಿನ ಶತಮಾನಗಳ ಸಾಂಸ್ಕೃತಿಕ, ಆಧ್ಯಾತ್ಮಿಕ ಹಾಗೂ ಭಾಷಾ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಆಯೋಜಿಸಿರುವ ಈ 5ನೇ ಆವೃತ್ತಿಯ ಕಾಶಿ-ತಮಿಳು ಸಂಗಮದಲ್ಲಿ ಈ ಬಾರಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ವಿಶೇಷ ಆಕರ್ಷಣೆಯಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ಗಣ್ಯರ ನುಡಿಗಳನ್ನು ವಿವಿಧ ಭಾಷೆಗಳಲ್ಲಿ ನೇರವಾಗಿ ವೀಕ್ಷಿಸುವ ವಿನೂತನ ವ್ಯವಸ್ಥೆ ಕಲ್ಪಿಸಲಾಗಿದೆ.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ಅಭಿವೃದ್ಧಿಪಡಿಸಿರುವ ‘ಅನುವಾದಿನಿ ಎಐ’ (Anuvadini AI) ತಂತ್ರಜ್ಞಾನದ ಮೂಲಕ ಗಣ್ಯರ ಭಾಷಣಗಳನ್ನು ಆಯ್ದ ಭಾಷೆಯಲ್ಲಿ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಪಠ್ಯ ರೂಪದಲ್ಲಿ ನೇರವಾಗಿ ವೀಕ್ಷಿಸಬಹುದಾಗಿದೆ. ರಾಜ್ಯದಲ್ಲಿ ತಮಿಳು ಅಥವಾ ಇಂಗ್ಲಿಷ್ ಭಾಷಾಜ್ಞಾನ ಇಲ್ಲದವರು ಸಹ ಕನ್ನಡದಲ್ಲಿಯೇ ತಿಳಿದುಕೊಳ್ಳಲು ಅವಕಾಶವಾಗಿದೆ.

AI ತಂತ್ರಜ್ಞಾನದ ಮೂಲಕ ಭಾಷಾಂತರ ನಿವಾರಿಸಿ ದೇಶದ ವಿವಿಧ ಭಾಗಗಳ ಜನರು ಒಂದೇ ವೇದಿಕೆಯ ಕಾರ್ಯಕ್ರಮದಲ್ಲಿ ಪ್ರಾದೇಶಿಕ ಭಾಷೆಗಳಲ್ಲಿಯೇ ಪಾಲ್ಗೊಳ್ಳುವಂತೆ ಮಾಡುವ ಪ್ರಯತ್ನ ಇದಾಗಿದೆ.

1,400ಕ್ಕೂ ಹೆಚ್ಚು ಪ್ರತಿನಿಧಿಗಳ ಭಾಗವಹಿಸುವಿಕೆ : ತಮಿಳುನಾಡಿನಿಂದ ಸುಮಾರು 1,400 ಪ್ರತಿನಿಧಿಗಳು ಏಳು ತಂಡಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವಾರಾಣಸಿ, ಪ್ರಯಾಗ್‌ರಾಜ್ ಮತ್ತು ಅಯೋಧ್ಯೆಗಳಲ್ಲಿ ಸಾಂಸ್ಕೃತಿಕ, ಶೈಕ್ಷಣಿಕ, ಆಧ್ಯಾತ್ಮಿಕ ಹಾಗೂ ಜ್ಞಾನ ವಿನಿಮಯ ಚಟುವಟಿಕೆಗಳು ನಡೆಯಲಿವೆ.

ಇದಲ್ಲದೆ, ದೇಶದಾದ್ಯಂತ ಸುಮಾರು 1,000 ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಕ ವಿದ್ಯಾರ್ಥಿಗಳಿಗಾಗಿ ತಿರುಕ್ಕುರಳಿನ ಅಧ್ಯಯನ, ಸಂಶೋಧನೆ ಮತ್ತು ಜ್ಞಾನ ಹಂಚಿಕೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಭಾಷಾ ವೈವಿಧ್ಯತೆಯ ನಡುವೆ ತಂತ್ರಜ್ಞಾನದ ಸಂಪರ್ಕ : ಕಾಶಿ ಮತ್ತು ತಮಿಳುನಾಡಿನ ನಡುವೆ ಇರುವ ಐತಿಹಾಸಿಕ ಸಂಬಂಧವನ್ನು ಆಚರಿಸುವ ಈ ಸಂಗಮವು ‘ಏಕ್ ಭಾರತ್, ಶ್ರೇಷ್ಠ ಭಾರತ್’ ಆಶಯಕ್ಕೆ ಅನುಗುಣವಾಗಿದೆ. ವಿವಿಧ ಭಾಷೆಗಳ ಜನರು ಒಂದೇ ಕಾರ್ಯಕ್ರಮದಲ್ಲಿ ತಮ್ಮ ಮಾತೃಭಾಷೆಯಲ್ಲಿಯೇ ಭಾಗವಹಿಸಲು ಅನುವಾದಿನಿ AI ನೆರವಾಗುತ್ತಿದೆ.

ಭಾಷಾಂತರ ತಂತ್ರಜ್ಞಾನವನ್ನು ಸಾಂಸ್ಕೃತಿಕ ಏಕತೆಯ ಸಾಧನವನ್ನಾಗಿ ಬಳಸುವ ಈ ಪ್ರಯತ್ನವು ಡಿಜಿಟಲ್ ಭಾರತದ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಕನ್ನಡಿಗರೂ ತಮ್ಮ ಭಾಷೆಯಲ್ಲಿಯೇ ಕಾರ್ಯಕ್ರಮವನ್ನು ವೀಕ್ಷಿಸಿ, ಕಾಶಿ-ತಮಿಳು ಸಂಗಮದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆತಿದೆ.