SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಆಸ್ತಿ ವಿವಾದ: ಸಹೋದರನ ಕೊಲೆ ಪ್ರಕರಣದಲ್ಲಿ ಇಬ್ಬರಿಗೆ ಜೀವಾವಧಿ ಶಿಕ್ಷೆ

ಆಸ್ತಿ ವಿವಾದ: ಸಹೋದರನ ಕೊಲೆ ಪ್ರಕರಣದಲ್ಲಿ ಇಬ್ಬರಿಗೆ ಜೀವಾವಧಿ ಶಿಕ್ಷೆ

0
86

ದಾವಣಗೆರೆ: ಆಸ್ತಿ ವಿಚಾರವಾಗಿ ಸಹೋದರನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ ಒಟ್ಟು 25 ಸಾವಿರ ದಂಡ ವಿಧಿಸಿ ದಾವಣಗೆರೆಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.

ಹರಿಹರ ನಗರದ ರಾಜು ಕೆ. (25) ಮತ್ತು ಮಾರುತಿ ಜಿ.ಕೆ. ಶಿಕ್ಷೆಗೆ ಒಳಗಾದ ಆರೋಪಿಗಳು. 2023ರ ಮೇ 15ರಂದು ಲಕ್ಷ್ಮಿ ಎಸ್. ಅಲಿಯಾಸ್ ರೇಖಾ ಅವರು ಹರಿಹರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅವರ ಮಾವ ಗುಡ್ಡಪ್ಪ ಅವರಿಗೆ ಇಬ್ಬರು ಪತ್ನಿಯರಿದ್ದು, ಮೊದಲ ಪತ್ನಿಯ ಮಗ ಕುಮಾರ ಕೆ.ಜಿ. (ದೂರುದಾರರ ಪತಿ) ಹಾಗೂ ಎರಡನೇ ಪತ್ನಿಯ ಮಕ್ಕಳಾದ ರಾಜು ಮತ್ತು ಮಾರುತಿ ನಡುವೆ ಆಸ್ತಿ ಪಾಲು ವಿಭಾಗದ ವಿಚಾರವಾಗಿ ಮನಸ್ತಾಪವಿತ್ತು.

ಈ ಹಿನ್ನೆಲೆಯಲ್ಲಿ 2023ರ ಮೇ 14ರಂದು ರಾಜು ಮತ್ತು ಮಾರುತಿ ಅವರು ಕುಮಾರನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಈ ಸಂಬಂಧ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ದಾವಣಗೆರೆಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪಿಗಳ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಗುರುರಾಜ್ ಸೋಮಕ್ಕಲವರ್ ಅವರು ನ. 25ರಂದು ಇಬ್ಬರಿಗೂ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ ಒಟ್ಟು 25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ದಂಡದ ಮೊತ್ತದಲ್ಲಿ 15 ಸಾವಿರವನ್ನು ಪ್ರಕರಣದ ಸಂತ್ರಸ್ತರಿಗೆ ನೀಡಬೇಕು ಹಾಗೂ ಉಳಿದ 10 ಸಾವಿರವನ್ನು ಸರ್ಕಾರಕ್ಕೆ ಜಮಾ ಮಾಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ಸತೀಶ್ ಕೆ. ಅವರು ಸಂತ್ರಸ್ತರ ಪರ ನ್ಯಾಯ ಮಂಡಿಸಿದ್ದರು.