SK Home Ad
Home ಸಿನಿ ಮಿಲ್ಸ್ ಅವರಿಗೆ ಅರ್ಥವಾದಂತೆ ರಾಮಾಯಣ ಮಾಡಿದ್ದಾರೆ, ನಿಮಗೆ ಅರ್ಥವಾದಂತೆ ನೀವೂ ಸಿನಿಮಾ ಮಾಡಿ: ಸುಪ್ರೀಂ ಖಡಕ್ ತಿರುಗೇಟು

ಅವರಿಗೆ ಅರ್ಥವಾದಂತೆ ರಾಮಾಯಣ ಮಾಡಿದ್ದಾರೆ, ನಿಮಗೆ ಅರ್ಥವಾದಂತೆ ನೀವೂ ಸಿನಿಮಾ ಮಾಡಿ: ಸುಪ್ರೀಂ ಖಡಕ್ ತಿರುಗೇಟು

0
31

ನವದೆಹಲಿ: ಮಹಾಕಾವ್ಯ ರಾಮಾಯಣದ ಕಥಾವಸ್ತುವನ್ನು ತಿರುಚಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಯಶ್ ಹಾಗೂ ರಣಬೀರ್ ಕಪೂರ್ ಅಭಿನಯದ ‘ರಾಮಾಯಣ’ ಚಿತ್ರದ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಸಿನಿಮಾ ಈಗಾಗಲೇ ಬಿಡುಗಡೆಯಾಗಿರುವುದರಿಂದ ಅರ್ಜಿಯನ್ನು ತುರ್ತಾಗಿ ಕೈಗೆತ್ತಿಕೊಳ್ಳುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಲ್ಯ ಬಾಗ್ಚಿ ಹಾಗೂ ವಿ. ಮೋಹನಾ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ವಕೀಲರು ತುರ್ತು ವಿಚಾರಣೆಗೆ ಮನವಿ ಮಾಡಿದರು. ನವೆಂಬರ್ 23ರಂದೇ ಅರ್ಜಿ ಸಲ್ಲಿಸಿದ್ದರೂ ಇನ್ನೂ ವಿಚಾರಣೆಗೆ ಪಟ್ಟಿ ಮಾಡಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಆದರೆ, ವಕೀಲರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದ ಸಿಜೆಐ, ಚಿತ್ರ ಈಗಾಗಲೇ ಬಿಡುಗಡೆಯಾಗಿದೆ. ಆಸಕ್ತಿ ಇದ್ದವರು ಅದನ್ನು ವೀಕ್ಷಿಸಿದ್ದಾರೆ ಎಂದು ಹೇಳುವ ಮೂಲಕ ತುರ್ತು ವಿಚಾರಣೆಗೆ ಅವಕಾಶ ನೀಡಲಿಲ್ಲ.

ಈ ವೇಳೆ ಚಿತ್ರದ ಮೂಲಕ ರಾಮಾಯಣ ಮಹಾಕಾವ್ಯದ ಹಲವು ಪ್ರಮುಖ ಸಂಗತಿಗಳನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ವಕೀಲರು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಜಾಯ್‌ಮಲ್ಯ ಬಾಗ್ಚಿ, ಮಹಾಕಾವ್ಯದ ಕುರಿತು ಚಿತ್ರತಂಡ ಹೊಂದಿರುವ ವ್ಯಾಖ್ಯಾನವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

‘ಅವರಿಗೆ ಅರ್ಥವಾದ ರೀತಿಯಲ್ಲಿ ಅವರು ಸಿನಿಮಾ ಮಾಡಿದ್ದಾರೆ. ನಿಮಗೆ ಅರ್ಥವಾದ ರೀತಿಯಲ್ಲಿ ನೀವೂ ಸಿನಿಮಾ ಮಾಡಿಕೊಳ್ಳಿ. ಮಹಾಕಾವ್ಯದ ಬಗ್ಗೆ ನಿಮ್ಮದೇ ದೃಷ್ಟಿಕೋನವಿದ್ದರೆ ಅದನ್ನು ಚಿತ್ರದ ಮೂಲಕ ವ್ಯಕ್ತಪಡಿಸಿ. ನ್ಯಾಯಾಲಯದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಬೇಡಿ’ ಎಂದು ನ್ಯಾಯಪೀಠ ಖಡಕ್ ಪ್ರತಿಕ್ರಿಯೆ ನೀಡಿತು.