SK Home Ad
Home ಸುದ್ದಿ ದೇಶ ಗಾಳಿಯಲ್ಲಿ ತೂರಾಡಿದ ತಟ್ಟೆಗಳು, ಸಾಂಬಾರ್ ಪಾತ್ರೆಗೆ ಬಿದ್ದ ವ್ಯಕ್ತಿ: ಶಾಸಕನ ಪುತ್ರಿಯ ಮದುವೆ ಔತಣಕೂಟ ಅಕ್ಷರಶಃ...

ಗಾಳಿಯಲ್ಲಿ ತೂರಾಡಿದ ತಟ್ಟೆಗಳು, ಸಾಂಬಾರ್ ಪಾತ್ರೆಗೆ ಬಿದ್ದ ವ್ಯಕ್ತಿ: ಶಾಸಕನ ಪುತ್ರಿಯ ಮದುವೆ ಔತಣಕೂಟ ಅಕ್ಷರಶಃ ರಣರಂಗ!

0
19

ಬಿಹಾರದ ಮೊಕಾಮಾ ಶಾಸಕ ಹಾಗೂ ಪ್ರಭಾವಿ ರಾಜಕಾರಣಿ ಅನಂತ್ ಸಿಂಗ್ ಅವರ ಪುತ್ರಿ ಶಿವಾಂಗಿ ಅವರ ವಿವಾಹ ಮಹೋತ್ಸವದ ಭರ್ಜರಿ ಔತಣಕೂಟವು ವ್ಯವಸ್ಥಾಪನಾ ವೈಫಲ್ಯ ಮತ್ತು ಜನಸಂದಣಿಯ ನೂಕುನುಗ್ಗಲಿನಿಂದಾಗಿ ಭಾರಿ ವಿವಾದಕ್ಕೆ ಕಾರಣವಾಗಿದೆ. ಪಾಟ್ನಾ ಜಿಲ್ಲೆಯ ನದ್ವಾನ್ ಗ್ರಾಮದಲ್ಲಿ ನವೆಂಬರ್ 25ರಂದು ನಡೆದ ಈ ಮದುವೆಗೆ ಇಡೀ ಬಿಹಾರಕ್ಕೇ ಮುಕ್ತ ಆಹ್ವಾನ ನೀಡಲಾಗಿತ್ತು. ಸುಮಾರು 4 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತಾದರೂ, ನಿರೀಕ್ಷೆಗೂ ಮೀರಿ ಜನಸಾಗರ ಹರಿದುಬಂದ ಪರಿಣಾಮ ಔತಣಕೂಟದ ಸ್ಥಳ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿತು.

ವೈರಲ್ ವಿಡಿಯೋಗಳಲ್ಲಿ ಕಂಡುಬಂದ ಭಯಾನಕ ದೃಶ್ಯಗಳು:

 ಗಾಳಿಯಲ್ಲಿ ತೂರಾಡಿದ ತಟ್ಟೆಗಳು: ಊಟದ ಕೌಂಟರ್‌ಗಳ ಬಳಿ ಜನಸಂದಣಿ ನಿಯಂತ್ರಿಸಲಾಗದೆ ಸಿಬ್ಬಂದಿ ಪ್ಲೇಟ್‌ಗಳನ್ನು (ಪತ್ತಲ್) ಗಾಳಿಯಲ್ಲಿ ತೂರಿದ್ದು, ಅವುಗಳನ್ನು ಹಿಡಿಯಲು ಅತಿಥಿಗಳು ಒಬ್ಬರ ಮೇಲೊಬ್ಬರು ಬಿದ್ದು ಮುಗಿಬಿದ್ದಿದ್ದಾರೆ.

 ರಟ್ಟಿನ ತುಂಡು, ಪೇಪರ್ ಮೇಲೆ ಊಟ: ತಟ್ಟೆ ಸಿಗದ ಹಲವರು ‘ಸುಧಾ’ ಹಾಲಿನ ಬ್ರಾಂಡ್‌ನ ರಟ್ಟಿನ ಪೆಟ್ಟಿಗೆಯ ತುಂಡುಗಳು ಹಾಗೂ ದಿನಪತ್ರಿಕೆಗಳ ಮೇಲೆ ಪೂರಿ, ಮಟರ್ ಪನೀರ್ ಹಾಕಿಸಿಕೊಂಡು ತಿಂದಿದ್ದಾರೆ.

 ಪಾತ್ರೆಯಿಂದಲೇ ಪನೀರ್ ಲೂಟಿ, ಸಾಂಬಾರ್ ಪಾತ್ರೆಗೆ ಬಿದ್ದ ವ್ಯಕ್ತಿ: ಕೆಲವರು ದೊಡ್ಡ ಪಾತ್ರೆಗಳಿಂದ ಬರಿಗೈಯಲ್ಲೇ ಪನೀರ್ ತುಂಡುಗಳನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಕಂಡುಬಂದಿದೆ. ಮತ್ತೊಂದು ವಿಡಿಯೋದಲ್ಲಿ ನೂಕುನುಗ್ಗಲಿನ ನಡುವೆ ವ್ಯಕ್ತಿಯೊಬ್ಬರು ದೊಡ್ಡ ಸಾಂಬಾರ್ ಪಾತ್ರೆಯೊಳಗೇ ಬಿದ್ದಿರುವುದು ಸೆರೆಯಾಗಿದೆ.

 ಲಾಠಿ ಪ್ರಹಾರ ಮತ್ತು ಟ್ರಾಫಿಕ್ ಜಾಮ್: ಜನಸಂದಣಿ ನಿಯಂತ್ರಿಸಲು ಸ್ಥಳದಲ್ಲಿ ಲಾಠಿ ಬೀಸಿರುವುದು ವಿಡಿಯೋಗಳಲ್ಲಿ ಕಾಣಿಸಿದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ 10 ಕಿ.ಮೀ ವರೆಗೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಬಿಹಾರ ವಿಧಾನಸಭಾ ಸ್ಪೀಕರ್ ಪ್ರೇಮ್ ಕುಮಾರ್ ಹಾಗೂ ಶಾಸಕ ರಾಮ್ ಕೃಪಾಲ್ ಯಾದವ್ ಕೂಡ ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡರು. ಜನಸಂದಣಿ ಹೆಚ್ಚಾದ ಕಾರಣ ಆಯೋಜಿಸಿದ್ದ ಕುದುರೆ ರೇಸ್ ಅನ್ನು 3 ಸುತ್ತುಗಳ ಬಳಿಕ ಮುಂದೂಡಲಾಯಿತು.

4 ಲಕ್ಷ ಜನರಿಗೆ ಅಡುಗೆ ಸಿದ್ಧಪಡಿಸಿದ್ದರೂ ಎಡವಟ್ಟಾಗಿದ್ದೆಲ್ಲಿ?: 500ಕ್ಕೂ ಹೆಚ್ಚು ಬಾಣಸಿಗರು ಹಾಗೂ 300 ಅಡುಗೆ ಕೇಂದ್ರಗಳ ಮೂಲಕ 8 ಬಗೆಯ ಸಿಹಿತಿಂಡಿ, 4 ಬಗೆಯ ಪಲ್ಯ, ಲಿಟ್ಟಿ-ಚೋಖಾ, ದೋಸೆ, ಕಾಶ್ಮೀರಿ ಪುಲಾವ್ ಸಿದ್ಧಪಡಿಸಲಾಗಿತ್ತು. “ಇಲ್ಲಿ ಊಟ ಸಿಗುವುದು ಯುದ್ಧ ಗೆದ್ದಷ್ಟೇ ಕಷ್ಟ, ರಸಗುಲ್ಲಾಗಳನ್ನು ಜನ ಲೂಟಿ ಮಾಡಿದ್ದಾರೆ” ಎಂದು ಅತಿಥಿಯೊಬ್ಬರು ಹೇಳಿರುವ ವಿಡಿಯೋ ವೈರಲ್ ಆಗಿದೆ.

 “ಲಕ್ಷಾಂತರ ಜನರನ್ನು ಆಹ್ವಾನಿಸುವ ಸಾಮರ್ಥ್ಯವಿದ್ದ ಮೇಲೆ ಅವರಿಗೆ ಗೌರವಯುತವಾಗಿ ಊಟ ಬಡಿಸುವ ಜವಾಬ್ದಾರಿಯೂ ಇರಬೇಕು; ಅನ್ನದಾನ ಶಕ್ತಿ ಪ್ರದರ್ಶನವಾಗಬಾರದು” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಮತ್ತು ಪತ್ರಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.