SK Home Ad
Home ಸಿನಿ ಮಿಲ್ಸ್ ಕ್ಯಾಪ್ಟನ್ಸಿಗಾಗಿ ಗಗನ್ ಜೀವನದ ಕಹಿ ರಹಸ್ಯ ಬಯಲು ಮಾಡಿದ ಗಾನವಿ, ಕೆಂಡಾಮಂಡಲವಾದ ಗಗನ್!

ಕ್ಯಾಪ್ಟನ್ಸಿಗಾಗಿ ಗಗನ್ ಜೀವನದ ಕಹಿ ರಹಸ್ಯ ಬಯಲು ಮಾಡಿದ ಗಾನವಿ, ಕೆಂಡಾಮಂಡಲವಾದ ಗಗನ್!

0
18

BBK13: ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ದಿನದಿಂದ ದಿನಕ್ಕೆ ಆಟದ ಸ್ವರೂಪ ಬದಲಾಗುತ್ತಿದ್ದು, ನವೆಂಬರ್ 25ರ ಸಂಚಿಕೆಯಲ್ಲಿ ನಡೆದ ವಿಶೇಷ ಟಾಸ್ಕ್ ಇಡೀ ಮನೆಯನ್ನು ಭಾವುಕವಾಗಿಸುವುದರ ಜೊತೆಗೆ ಸ್ಪರ್ಧಿಗಳ ನಡುವೆ ದೊಡ್ಡ ಬಿರುಕು ಮೂಡಿಸಿದೆ. ಮನೆಗೆ ಬಂದ ವಿಶೇಷ ಅತಿಥಿ ‘ಟೇಪ್ ರೆಕಾರ್ಡರ್’ ಮುಂದೆ ಯಾರಿಗೂ ಹೇಳಿಕೊಳ್ಳದ ವೈಯಕ್ತಿಕ ರಹಸ್ಯಗಳನ್ನು ಹಂಚಿಕೊಳ್ಳುವಂತೆ ಬಿಗ್ ಬಾಸ್ ಸೂಚಿಸಿದ್ದರು. ಅಲ್ಲದೆ, ಈ ಮಾತುಗಳು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತವೆ ಎಂಬ ಭರವಸೆಯನ್ನೂ ನೀಡಿದ್ದರು. ಅದರಂತೆ ಗಗನ್ ಚಿನ್ನಪ್ಪ, ಕಿರಣ್ ಶಾಸ್ತ್ರಿ, ಜಗದೀಶ್, ಆಸಿಯಾ ಫಿರ್ದೋಸ್ ಸೇರಿದಂತೆ ಎಲ್ಲಾ ಸ್ಪರ್ಧಿಗಳು ಆಕ್ಟಿವಿಟಿ ರೂಮ್‌ಗೆ ತೆರಳಿ ತಮ್ಮ ಜೀವನದ ರಹಸ್ಯಗಳನ್ನು ರೆಕಾರ್ಡ್ ಮಾಡಿದ್ದರು.

ಆದರೆ, ಈ ಪ್ರಕ್ರಿಯೆಗೆ ಬಿಗ್ ಬಾಸ್ ಕ್ಯಾಪ್ಟನ್ಸಿ ಟ್ವಿಸ್ಟ್ ನೀಡಿದರು. ನೇರವಾಗಿ ಕ್ಯಾಪ್ಟನ್ಸಿ ಓಟಕ್ಕೆ ಆಯ್ಕೆಯಾಗಲು ಗಾನವಿ ಗೌಡ ಮತ್ತು ಆಸಿಯಾ ಫಿರ್ದೋಸ್ ಅವರಿಗೆ ಬಜರ್ ಒತ್ತುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಆಸಿಯಾಗಿಂತ ವೇಗವಾಗಿ ಬಜರ್ ಒತ್ತಿ ಗೆದ್ದ ಗಾನವಿ, ನಿಯಮದಂತೆ ಸಹಸ್ಪರ್ಧಿ ಗಗನ್ ಚಿನ್ನಪ್ಪ ಅವರ ರಹಸ್ಯವನ್ನು ಇಡೀ ಮನೆಯ ಮುಂದೆ ಬಹಿರಂಗಪಡಿಸುವ ನಿರ್ಧಾರ ಪ್ರಕಟಿಸಿದರು. ಈ ಮೂಲಕ ಕ್ಯಾಪ್ಟನ್ಸಿ ರೇಸ್‌ಗೆ ನೇರವಾಗಿ ಅರ್ಹತೆ ಪಡೆದ ಗಾನವಿ, ಗಗನ್ ಅವರ ವೈಯಕ್ತಿಕ ನೋವಿನ ಕಥೆ ಬಯಲಾಗಲು ಕಾರಣರಾದರು.

ಗಾನವಿ ಆಯ್ಕೆಯಂತೆ ಪ್ಲೇ ಆದ ವಿಟಿಯಲ್ಲಿ, ಗಗನ್ ತಮ್ಮ ಕೈ ಮೇಲಿರುವ ಟ್ಯಾಟೂ ಹಿಂದಿನ ಎಂಟು ವರ್ಷಗಳ ಹಿಂದಿನ ಕಹಿ ಘಟನೆಯನ್ನು ಬಿಚ್ಚಿಟ್ಟಿದ್ದರು. ಎಂಟು ವರ್ಷಗಳ ಹಿಂದೆ ಆತ್ಮೀಯ ಗೆಳೆಯನೊಂದಿಗೆ ಸೇರಿ ಗಗನ್ ಹೊಸ ಬ್ಯುಸಿನೆಸ್ ಆರಂಭಿಸಿದ್ದರು. ಆದರೆ, ಒಂದು ದಿನ ಏಕಾಏಕಿ ಕಾಣೆಯಾದ ಆ ಗೆಳೆಯ ಆತ್ಮಹತ್ಯೆಗೆ ಶರಣಾಗಿದ್ದರು. ಸಾಯುವ ಮುನ್ನ 500 ರೂಪಾಯಿ ನೋಟಿನ ಮೇಲೆ ಕ್ಷಮೆ ಕೋರುವ ಸಂದೇಶ ಬರೆದಿಟ್ಟಿದ್ದು, ಆ ಸಾವಿನ ಹಿಂದಿನ ನಿಗೂಢ ಕಾರಣ ಇಂದಿಗೂ ತಿಳಿದಿಲ್ಲ ಎಂದು ಗಗನ್ ಭಾವುಕರಾಗಿದ್ದರು. ಈ ಘಟನೆ ಕೇಳಿ ಮನೆಯವರೆಲ್ಲರೂ ಕಣ್ಣೀರಿಟ್ಟರು.

ಮತ್ತೊಂದೆಡೆ, ಈ ಹಿಂದೆ ಗಾನವಿ ಅವರನ್ನು ಮನೆಯ ಮಹಾರಾಣಿ ಮಾಡಲು ಪ್ರಾಮಾಣಿಕವಾಗಿ ಶ್ರಮಿಸಿದ್ದ ಗಗನ್ ಚಿನ್ನಪ್ಪ, ಈಗ ತಮ್ಮ ನೋವಿನ ರಹಸ್ಯವನ್ನೇ ಬಯಲು ಮಾಡಿದ್ದಕ್ಕೆ ತೀವ್ರ ಆಕ್ರೋಶಗೊಂಡಿದ್ದಾರೆ. “ಇನ್ಮೇಲಿಂದ ಎಲ್ಲಿ ಇಡಬೇಕು ಅಲ್ಲಿಯೇ ಇಡುತ್ತೇನೆ, ಗೇಮ್ ಈಗ ಸ್ಟಾರ್ಟ್” ಎಂದು ಗಾನವಿಗೆ ನೇರವಾಗಿ ಖಡಕ್ ಸವಾಲು ಹಾಕಿದ್ದು, ಇಬ್ಬರ ನಡುವಿನ ಸಂಘರ್ಷ ತಾರಕಕ್ಕೇರಿದೆ.