SK Home Ad
Home ನಮ್ಮ ಜಿಲ್ಲೆ ಧಾರವಾಡ ಬಸವ ಮಂಟಪ ಕೃತಿ ಬಗ್ಗೆ ಚರ್ಚೆಯಾಗಲಿ, ಬ್ಯಾನ್ ಸರಿಯಲ್ಲ

ಬಸವ ಮಂಟಪ ಕೃತಿ ಬಗ್ಗೆ ಚರ್ಚೆಯಾಗಲಿ, ಬ್ಯಾನ್ ಸರಿಯಲ್ಲ

0
33

ಹುಬ್ಬಳ್ಳಿ: ಬಸವ ಮಂಟಪ ಕೃತಿ ಬಗ್ಗೆ ಎದ್ದಿರುವ ವಿವಾದಗಳನ್ನು ಗಮನಿಸಿದ್ದೇನೆ. ಕೃತಿ ಕುರಿತು ಆರೋಗ್ಯಕರ ಚರ್ಚೆಗಳಾಗಲಿ. ಆಗ ಸತ್ವ ಇಲ್ಲದ ಕೃತಿಯನ್ನು ಜನರೇ ತಿರಸ್ಕರಿಸುತ್ತಾರೆ ಎಂದು ನಟ ಚೇತನ್ ಅಹಿಂಸಾ ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೇಖಕರು ಅಧ್ಯಯನ ಮಾಡಿ ಒಂದು ಕೃತಿಯನ್ನು ಬರೆದಾಗ ಅದರ ಬಗ್ಗೆ ಚರ್ಚೆಗಳಾಗಬೇಕು. ಆಗ ಸತ್ಯಾಸತ್ಯತೆಗಳು ಹೊರಬರುತ್ತವೆ. ಈ ಕೃತಿಯಲ್ಲಿ ಹೊಸ ವಿಚಾರಗಳು ಬಂದಿರುವುದರಿಂದ ಚರ್ಚೆಗಳಾಗಲಿ ಎಂಬುದು ನನ್ನ ಅಭಿಪ್ರಾಯ ಎಂದರು.

ಬಸವಣ್ಣ ಮತ್ತು ಬಸವಾದಿ ಶರಣರು ಇಡೀ ಮನುಕುಲಕ್ಕೆ ಉತ್ತಮ ವ್ಯಕ್ತಿಗಳು. ಅವರ ವಿಚಾರಗಳನ್ನು ವಿಶ್ವಕ್ಕೆ ಪಸರಿಸಲು ನಮಗೆ ಚರ್ಚೆಗಳು ಬೇಕು. ಬಸವ ಮಂಟಪ ಕೃತಿಯಲ್ಲಿ ಬಿಜ್ಜಳನ ಸಂಪತ್ತನ್ನು ಬಸವಣ್ಣ ಜನರಿಗೆ ಹಂಚಿದ್ದಾರೆ ಎಂಬುದನ್ನು ನಾನು ಒಪ್ಪುವುದಿಲ್ಲ. ಈ ವಿಚಾರದಲ್ಲಿ ಬಸವಣ್ಣನವರು ಅಂದು ಎಲ್ಲರಿಗೂ ಆರ್ಥಿಕ ನ್ಯಾಯ ಒದಗಿಸಿದ್ದರು ಎಂಬುದನ್ನು ಮನಗಾಣಬೇಕು ಎಂದರು.

ಬಸವ ಮಂಟಪ ಕೃತಿ ಬ್ಯಾನ್ ಮಾಡುವ ಸಂಸ್ಕೃತಿ ಬಹಳ ಅಪಾಯಕಾರಿ. ಬ್ಯಾನ್ ಮಾಡಿದರೆ ಹೊಸ ವಿಚಾರಗಳು ಹೊರಬರಲು ಸಾಧ್ಯವಾಗುವುದಿಲ್ಲ. ನಿಮಗೆ ಇಷ್ಟವಿಲ್ಲದಿದ್ದರೆ ಬಸವಣ್ಣನವರ ಬಗ್ಗೆ ನೀವೇ ಒಂದು ಕೃತಿ ರಚಿಸಿ. ಸಂವಿಧಾನದ ಮೂಲತತ್ವಗಳನ್ನು ಎತ್ತಿ ಹಿಡಿದವರೇ ಬಸವಾದಿ ಶರಣರು ಎಂದು ಹೇಳಿದರು.

ಬಸವ ಮಂಟಪ ಕೃತಿಯಲ್ಲಿ `ಲಿಂಗಾಹತ ಎಂಬ ವಿಷಯಗಳ ಬಗ್ಗೆ ನನಗೂ ನೋವಾಗಿದೆ. ಈ ಕೃತಿಯಲ್ಲಿ ಕೆಲವು ಅಸತ್ಯಗಳಿರಬಹುದು. ಅವುಗಳ ಬಗ್ಗೆ ಚರ್ಚೆಗಳಾಗಬೇಕು. ನಿಜವಾದ ಸತ್ಯಗಳು ಹೊರಬರಬೇಕಾದರೆ ಆರೋಗ್ಯಕರ ಚರ್ಚೆಗಳು ನಮ್ಮ ನಡುವೆ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬಸವಣ್ಣನವರನ್ನು ಒಂದು ಬಲಿಷ್ಠ ಸಮುದಾಯಕ್ಕೆ ಸೀಮಿತಗೊಳಿಸಿರುವುದರಿಂದ ಪುಸ್ತಕ ಬ್ಯಾನ್ ಮಾಡುವ ಸರ್ಕಾರದ ನಿರ್ಧಾರ ಸರಿಯಲ್ಲ. ಪುಸ್ತಕದಲ್ಲಿನ ಅಸತ್ಯ ಮಾಹಿತಿಯನ್ನು ತೆಗೆಯಲು ಒಂದು ಸಮಿತಿಯನ್ನು ಸರ್ಕಾರ ರಚಿಸಲಿ ಎಂದು ಚೇತನ್ ಅಹಿಂಸಾ ಆಗ್ರಹಿಸಿದರು.