ಮಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಕಾರ್ಯಕ್ರಮ ಡಿ. 4ರಿಂದ ಆರಂಭವಾಗಲಿದ್ದು, ಡಿ. 7ರಂದು ಸರ್ವಧರ್ಮ ಸಮ್ಮೇಳನ ಮತ್ತು ಡಿ. 8ರಂದು ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಡಿ. 7ರಂದು ಸಂಜೆ 5ಗಂಟೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ಸರ್ವಧರ್ಮ ಸಮ್ಮೇಳನದ 94ನೇ ಅಧಿವೇಶನವನ್ನು ಸಂಸದ ತೇಜಸ್ವಿ ಸೂರ್ಯ ಉದ್ಘಾಟಿಸುವರು. ಬೆಂಗಳೂರಿನ ಅಹಿಂಸಾ ವಿಶ್ವಭಾರತಿ ಮತ್ತು ವಿಶ್ವಶಾಂತಿ ಕೇಂದ್ರದ ಸಂಸ್ಥಾಪಕ ಜೈನಮುನಿ ಆಚಾರ್ಯ ಲೋಕೇಶ ಮುನೀಜಿ ಅಧ್ಯಕ್ಷತೆ ವಹಿಸುವರು. ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಅಸ್ಲಂ ಮಿಯಾ ಮತ್ತು ಮಂಗಳೂರಿನ ಸೇಂಟ್ ಲಾರೆನ್ಸ್ ಚರ್ಚ್ನ ನಿರ್ದೇಶಕ ಸ್ವಾಮಿ ಬಾಸಿಲ್ವಾಸ್ ಉಪನ್ಯಾಸ ನೀಡುವರು. ಬೆಂಗಳೂರಿನ ಸಂಗೀತಗಾಯಕಿ ಶಿವಶ್ರೀ ತೇಜಸ್ವಿಸೂರ್ಯ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಡಿ. 8ರಂದು ಸಂಜೆ 5ಗಂಟೆಗೆ ಸಾಹಿತ್ಯ ಸಮ್ಮೇಳನದ 94ನೇ ಅಧಿವೇಶನವನ್ನು ರಾಜ್ಯಪಾಲೆ ಸುಧಾ ಯಾದವ್ ಉದ್ಘಾಟಿಸುವರು. ವಾಗ್ಮಿ ವೈ.ವಿ. ಗುಂಡೂರಾವ್ ಅಧ್ಯಕ್ಷತೆ ವಹಿಸುವರು. ಲೇಖಕ ಮಂಜುನಾಥ ಅಜ್ಜಂಪುರ, ನಿವೃತ್ತ ಪ್ರಾಂಶುಪಾಲ ವರದರಾಜ ಚಂದ್ರಗಿರಿ, ಪ್ರಾಧ್ಯಾಪಕಿ ಪದ್ಮಿನಿ ನಾಗರಾಜು ಉಪನ್ಯಾಸ ನೀಡುವರು. ರಾಧೇ ಜಗ್ಗಿ ಬಳಗದವರಿಂದ `ಅನುಮಾರ್ಗ’ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 12 ಗಂಟೆ ಬಳಿಕ ಲಕ್ಷದೀಪೋತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.






















