ಧಾರವಾಡ: ಜಗಜ್ಯೋತಿ ಬಸವಣ್ಣನವರ ಕುರಿತು ಲೇಖಕ ರವಿ ಹಂಜ್ ಅವರು ತಮ್ಮ ‘ಬಸವ ಮಂಟಪ’ ಪುಸ್ತಕದಲ್ಲಿ ನೈಜ ಸಂಗತಿಗಳನ್ನು ಉಲ್ಲೇಖಿಸದೆ, ವ್ಯತಿರಿಕ್ತ ಹಾಗೂ ಕಪೋಲಕಲ್ಪಿತ ವಿಚಾರಗಳನ್ನು ಬರೆದಿರುವುದು ತೀವ್ರ ನೋವುಂಟು ಮಾಡಿದೆ ಎಂದು ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಜಗದ್ಗುರು ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಪ್ಪಿನಬೆಟಗೇರಿ ಶ್ರೀಮಠದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಣ್ಣನವರು ಬಿಜ್ಜಳ ರಾಜನನ್ನು ಕೊಲ್ಲಿಸಿದರು ಹಾಗೂ ರಾಜನ ಭಂಡಾರದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದರು ಎಂದು ‘ಬಸವ ಮಂಟಪ’ ಪುಸ್ತಕದಲ್ಲಿ ಉಲ್ಲೇಖಿಸಿರುವುದು ಮಾಧ್ಯಮಗಳ ಮೂಲಕ ತಿಳಿದುಬಂದಿದೆ. ಇಂತಹ ಆರೋಪಗಳು ಸಂಪೂರ್ಣ ಸುಳ್ಳು. ಕಾಯಕವೇ ಕೈಲಾಸ ಎಂಬ ತತ್ವ ಸಾರಿದ, ಸಕಲ ಜೀವಾತ್ಮರಿಗೂ ಒಳಿತನ್ನೇ ಬಯಸಿದ ಬಸವೇಶ್ವರರು, ‘ಇವನಾರವ ಇವನಾರವ ಎನ್ನದೆ, ಇವ ನಮ್ಮವ ಇವ ನಮ್ಮವ’ ಎಂಬ ಸಮಾನತೆಯ ಸಂದೇಶವನ್ನು ಜಗತ್ತಿಗೆ ಸಾರಿದ ಮಹಾನ್ ಮಾನವತಾವಾದಿ ಎಂದು ಹೇಳಿದರು.
ಹರಿಹರನ ಕಾವ್ಯ, ಪಾಲ್ಕುರಿಕೆ ಸೋಮನಾಥರು ತೆಲುಗಿನಲ್ಲಿ ರಚಿಸಿದ ಬಸವ ಪುರಾಣ ಹಾಗೂ ಭೀಮಕವಿ ಕನ್ನಡದಲ್ಲಿ ಬರೆದ ಬಸವ ಪುರಾಣಗಳಲ್ಲಿ ಉಲ್ಲೇಖವಾಗಿರುವ ಸಂಗತಿಗಳನ್ನು ಗಮನಿಸಿದರೆ, ಬಿಜ್ಜಳ ರಾಜನ ಸಿಂಹಾಸನದ ಕೆಳಗೆ ದೊರೆತ ಅಪಾರ ಸಂಪತ್ತಿನಲ್ಲಿ ಕೆಲವೊಂದನ್ನು ಬಸವಣ್ಣನವರಿಗೆ ನೀಡಲು ರಾಜ ಮುಂದಾದಾಗ ಅವರು ಅದನ್ನು ನಿರಾಕರಿಸಿದ್ದರು. ಹೀಗಿರುವಾಗ ರಾಜನ ಭಂಡಾರದ ಹಣವನ್ನು ದುರುಪಯೋಗಪಡಿಸಿಕೊಂಡರು ಎಂಬ ಆರೋಪಕ್ಕೆ ಯಾವುದೇ ಆಧಾರವಿಲ್ಲ ಎಂದು ಸ್ಪಷ್ಟಪಡಿಸಿದರು.
ಅದೇ ರೀತಿ, ಬಿಜ್ಜಳ ರಾಜನು ಬಸವಣ್ಣನವರಿಗೆ ಗಡಿಪಾರು ಶಿಕ್ಷೆ ವಿಧಿಸಿದ್ದಲ್ಲದೆ, ಸಮಗಾರ ಹರಳಯ್ಯ ಮತ್ತು ಮಧುವರಸರಿಗೆ ಎಳಿಹೂಟಿ ಶಿಕ್ಷೆ ನೀಡಿ ಹತ್ಯೆಗೈದಿದ್ದ. ಈ ವಿಷಯ ತಿಳಿದ ಜಗದೇವ ಮಂತ್ರಿಯ ತಾಯಿ, ಕಲ್ಯಾಣದಲ್ಲಿ ಇಂತಹ ಶಿವದ್ರೋಹ ನಡೆಯುತ್ತಿದ್ದರೂ ಸುಮ್ಮನಿದ್ದೀಯಾ ಎಂದು ಮಗನನ್ನು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ರೋಷಗೊಂಡ ಜಗದೇವ ಮಂತ್ರಿ ತನ್ನ ಆಪ್ತ ಸೈನಿಕರಾದ ಮಲ್ಲ ಮತ್ತು ಬೊಮ್ಮಯ್ಯ ಅವರೊಂದಿಗೆ ಸೇರಿ ಬಿಜ್ಜಳ ರಾಜನನ್ನು ಹತ್ಯೆ ಮಾಡಿದ್ದಾನೆ ಎಂಬುದು ಐತಿಹಾಸಿಕ ಕಾವ್ಯಗಳಲ್ಲಿ ಉಲ್ಲೇಖವಾಗಿದೆ. ಹೀಗಾಗಿ ಬಸವಣ್ಣನವರೇ ಬಿಜ್ಜಳ ರಾಜನ ಹತ್ಯೆ ಮಾಡಿಸಿದರು ಎಂಬ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ತಿಳಿಸಿದರು.
ಮಹಾಮಾನವತಾವಾದಿ ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಇಲ್ಲಸಲ್ಲದ ಆರೋಪಗಳನ್ನು ಯಾರೂ ಮಾಡಬಾರದು. ಇಂತಹ ಘಟನೆಗಳು ಮರುಕಳಿಸಿದರೆ ಸಮಾಜ ಮೌನವಾಗಿರದೆ ಸೂಕ್ತ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮೈಸೂರು ಗೆಜೆಟ್ನಲ್ಲಿ ಬಿ.ಎಲ್. ರೈಸ್ ಅವರು ಉಲ್ಲೇಖಿಸಿರುವ ‘ಬಿಜ್ಜಳಾಂಕ ಕಾವ್ಯ’ ಮತ್ತು ‘ಬಿಜ್ಜಳರಾಯ ಚರಿತೆ’ಯಲ್ಲಿನ ವಿಚಾರಗಳನ್ನು ಆಧಾರವಾಗಿಟ್ಟುಕೊಂಡು, ಮತ್ಸರದ ಭಾವನೆಯಿಂದ ಬಸವಣ್ಣನವರ ವ್ಯಕ್ತಿತ್ವಕ್ಕೆ ಕಳಂಕ ತರುವ ಉದ್ದೇಶದಿಂದ ‘ಬಸವ ಮಂಟಪ’ ಪುಸ್ತಕ ರಚಿಸಲಾಗಿದೆ ಎಂದು ಆರೋಪಿಸಿದರು.
ಸರ್ಕಾರ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಂಡಿರುವುದು ಸರಿಯಾದ ಕ್ರಮವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಪುಸ್ತಕ ಎಲ್ಲಿಯೂ ಮತ್ತಷ್ಟು ಹಂಚಿಕೆಯಾಗದಂತೆ ತಡೆಯಬೇಕು ಎಂದು ಕುಮಾರ ವಿರೂಪಾಕ್ಷ ಸ್ವಾಮೀಜಿ ಸರ್ಕಾರವನ್ನು ಆಗ್ರಹಿಸಿದರು.





















