BBK13: ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಮನೆಯಲ್ಲಿ ಯುವರಾಣಿಯರಿಗೆ ನೀಡಲಾಗಿದ್ದ ಲಕ್ಷುರಿ ಕಾಫಿಯನ್ನು ಉಳಿದ ಸದಸ್ಯರೊಂದಿಗೆ ಹಂಚಿಕೊಂಡ ಕಾರಣಕ್ಕೆ ಬಿಗ್ ಬಾಸ್ ಮನೆಯ ಗ್ಯಾಸ್ ಪೂರೈಕೆಯನ್ನು ಸ್ಥಗಿತಗೊಳಿಸಿದ್ದರು. ಸ್ಪರ್ಧಿಗಳು ಕ್ಷಮೆಯಾಚಿಸಿ ಗ್ಯಾಸ್ ಆನ್ ಮಾಡುವಂತೆ ಮನವಿ ಮಾಡಿದಾಗ, ಬಿಗ್ ಬಾಸ್ ಭರ್ಜರಿ ಟ್ವಿಸ್ಟ್ ನೀಡಿದ್ದಾರೆ. “ನಿಮಗೆ ಒಲೆ ಹೊತ್ತಿಸಬೇಕೇ ಅಥವಾ ಊಟ ಬೇಕೇ?” ಎಂದು ಬಿಗ್ ಬಾಸ್ ಕೇಳಿದಾಗ, ಯಶಸ್ ಅವರು “ಕಿಚ್ಚ ಸುದೀಪ್ ಸರ್ ತಮ್ಮ ಕೈಯಾರೆ ಬಿರಿಯಾನಿ ಮಾಡಿಕೊಡುತ್ತಾರೆ” ಎಂದು ನಿಖರವಾಗಿ ಊಹಿಸಿದ್ದಾರೆ.
ಯಶಸ್ ಅವರ ಊಹೆ ನಿಜವಾಗಿದ್ದು, ಪ್ರತಿ ಸೀಸನ್ನ ವಾಡಿಕೆಯಂತೆ ಈ ಬಾರಿಯೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ‘ಕಿಚ್ಚ ಕೆಫೆ’ ಲೋಗೋದೊಂದಿಗೆ ಸ್ವತಃ ಕೈಯಾರೆ ತಯಾರಿಸಿದ ಬಗೆಬಗೆಯ ವೆಜ್ ಹಾಗೂ ನಾನ್-ವೆಜ್ ಭಕ್ಷ್ಯಗಳನ್ನು ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಗಾರ್ಡನ್ ಏರಿಯಾದಲ್ಲಿ ವಿಶೇಷ ಟೇಬಲ್ ಹಾಕಿ, ಪ್ರತಿಯೊಬ್ಬರ ಹೆಸರಿರುವ ಬ್ಯಾಗ್ಗಳಲ್ಲಿ ಬಿರಿಯಾನಿ, ಕಬಾಬ್ ಹಾಗೂ ವಿಶೇಷ ತಿನಿಸುಗಳನ್ನು ಬಡಿಸಲಾಗಿದೆ. ಸಸ್ಯಾಹಾರಿಯಾಗಿರುವ ಕಿರಣ್ ಶಾಸ್ತ್ರಿ ಅವರಿಗೆ ಪ್ರತ್ಯೇಕ ವೆಜ್ ಊಟದ ವ್ಯವಸ್ಥೆ ಮಾಡಲಾಗಿತ್ತು.

ಜಿಯೋ ಹಾಟ್ಸ್ಟಾರ್ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಸ್ಪರ್ಧಿಗಳು ಬಾಯಿ ಚಪ್ಪರಿಸಿಕೊಂಡು ಕಿಚ್ಚನ ಕೈರುಚಿಯನ್ನು ಸವಿದಿದ್ದಾರೆ. ಈ ವೇಳೆ ಭಾವುಕರಾದ ಯಶಸ್, “ನಾನು ಸುದೀಪ್ ಸರ್ ಕೈಯಡುಗೆ ತಿನ್ನುತ್ತಿರುವುದನ್ನು ನೋಡಿ ನಮ್ಮ ಅಮ್ಮ ತುಂಬಾ ಖುಷಿಪಡುತ್ತಾರೆ” ಎಂದಿದ್ದಾರೆ. ಪ್ರಶಾಂತ್ ಮತ್ತು ಧನುಷ್ ಮಾತನಾಡಿ, “ಕೋಟ್ಯಂತರ ಅಭಿಮಾನಿಗಳು ಹಂಬಲಿಸುವ ಕಿಚ್ಚನ ಕೈರುಚಿ ಇಂದು ಮನೆಯ 11 ಮಂದಿಗೂ ಸಿಕ್ಕಿರುವುದು ನಮ್ಮ ಪುಣ್ಯ” ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.
ಇತ್ತ ಗಾನವಿ ಗೌಡ “ಇಷ್ಟು ಪ್ರೀತಿಯಿಂದ ಅಡುಗೆ ಮಾಡಿ ಕಳುಹಿಸಿರುವುದು ಅವಿಸ್ಮರಣೀಯ ಅನುಭವ” ಎಂದು ಸಂತಸ ಹಂಚಿಕೊಂಡರೆ, ಮಂಜ “ಬಾದ್ಷಾ ಸುದೀಪ್ ಅಣ್ಣನ ಕೈಯಡುಗೆ ತಿಂದಿರುವುದು ಜೀವನಪೂರ್ತಿ ನೆನಪಿರುವ ಸೌಭಾಗ್ಯ” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.






















