ಬೆಳಗಾವಿ: ಹೆತ್ತವರಷ್ಟೇ ಪ್ರೀತಿಯಿಂದ ಮೊಮ್ಮಗನನ್ನು ಬೆಳೆಸಿದ್ದ ಅಜ್ಜಿಯ ಪಾಲಿಗೆ ಅದೇ ಮೊಮ್ಮಗ ಯಮನಾಗಿ ಬಂದಿದ್ದಾನೆ. ವೃದ್ಧಾಪ್ಯದಲ್ಲಿ ಆಸರೆಯಾಗಬೇಕಿದ್ದ ಮೊಮ್ಮಗನೇ, ಗೃಹಲಕ್ಷ್ಮಿ ಯೋಜನೆಯ ಹಣದ ಮೇಲಿನ ಆಸೆಗೆ ಅಜ್ಜಿಯ ಉಸಿರನ್ನೇ ನಿಲ್ಲಿಸಿದ್ದಾನೆ. ತಿಂಗಳಿಗೆ ಬರುತ್ತಿದ್ದ ಗೃಹಲಕ್ಷ್ಮಿ ಹಣದಲ್ಲಿ ತನಗೂ ಪಾಲು ನೀಡಬೇಕೆಂಬ ಆತನ ದುರಾಸೆಗೆ ಅಜ್ಜಿ ಒಪ್ಪದಿದ್ದುದೇ ಕೊಲೆಗೆ ಕಾರಣವಾಗಿದೆ. ಅಜ್ಜಿ-ಮೊಮ್ಮಗನ ಪವಿತ್ರ ಸಂಬಂಧವನ್ನೇ ಹಣದ ಆಸೆ ಬಲಿ ಪಡೆದಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.
ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದ ಹಮ್ಮವ್ವ ಬಾಲಪ್ಪ ಸನದಿ (78) ಕೊಲೆಯಾದ ವೃದ್ಧೆ. ಕೊಲೆ ಆರೋಪದಲ್ಲಿ ಅವರ ಮೊಮ್ಮಗ ಭೀಮಪ್ಪ ರಾಮಪ್ಪ ಸನದಿ (20)ಯನ್ನು ಯಮಕನಮರಡಿ ಪೊಲೀಸರು ಬಂಧಿಸಿದ್ದಾರೆ.
ಸಂತೆಗೆ ಹೋಗುವ ದಾರಿಯಲ್ಲೇ ಕತ್ತು ಹಿಸುಕಿದ: ನವೆಂಬರ್ 10ರಂದು ಪಾಶ್ಚಾಪುರ ಸಂತೆಗೆ ಹೋಗುವುದಾಗಿ ಅಜ್ಜಿಯನ್ನು ಬೈಕ್ನಲ್ಲಿ ಕರೆದೊಯ್ದಿದ್ದ ಮೊಮ್ಮಗ ಭೀಮಪ್ಪ, ಅರಳಿಕಟ್ಟಿ ಗ್ರಾಮದ ಹೊರವಲಯದಲ್ಲಿ ಮತ್ತೊಮ್ಮೆ ಗೃಹಲಕ್ಷ್ಮಿ ಹಣದಲ್ಲಿ ಪಾಲು ನೀಡುವಂತೆ ಕೇಳಿದ್ದಾನೆ. ಆದರೆ, ಅಜ್ಜಿ ಹಮ್ಮವ್ವ ಹಣ ನೀಡಲು ನಿರಾಕರಿಸಿದ್ದಾರೆ. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ. ಕೊನೆಗೆ ಕ್ಷಣಿಕ ಸಿಟ್ಟೋ, ಹಣದ ಮೇಲಿನ ದುರಾಸೆಯೋ ಅಜ್ಜಿಯ ಕತ್ತು ಹಿಸುಕಿ ಕೊಲೆ ಮಾಡುವಷ್ಟು ಕ್ರೂರನಾಗಿದ್ದಾನೆ ಮೊಮ್ಮಗ.
ಸಾಕ್ಷ್ಯ ಮರೆಮಾಚಲು ಶವವನ್ನೇ ನೀರಿಗೆಸೆದ: ಅಜ್ಜಿಯನ್ನು ಕೊಂದ ಬಳಿಕವೂ ಆತನ ಮನಸ್ಸು ಕರಗಲಿಲ್ಲ. ಹಮ್ಮವ್ವ ಅವರ ಬಳಿಯಿದ್ದ 2,300 ರೂ. ಹಣವನ್ನು ತೆಗೆದುಕೊಂಡಿದ್ದಾನೆ. ಬಳಿಕ ಶವವನ್ನು ಗೋಣಿಚೀಲಗಳಲ್ಲಿ ಕಟ್ಟಿ, ರಾತ್ರಿ ವೇಳೆ ಸಂಜಿನಜಾಳ ಗ್ರಾಮದ ಡ್ಯಾಂ ಹಿನ್ನೀರಿನ ಕಡೆಗೆ ಸಾಗಿಸಿದ್ದಾನೆ. ಯಾರಿಗೂ ಸುಳಿವು ಸಿಗದಂತೆ ಶವದ ಮೇಲೆ ಕಲ್ಲುಗಳನ್ನಿಟ್ಟು ನೀರಿಗೆ ಎಸೆದಿದ್ದಾನೆ.
ಐದು ದಿನಗಳ ಬಳಿಕ ಬಯಲಾದ ಕೊಲೆ ರಹಸ್ಯ: ನವೆಂಬರ್ 15ರಂದು ಡ್ಯಾಂ ಹಿನ್ನೀರಿನಲ್ಲಿ ಹಮ್ಮವ್ವ ಅವರ ಶವ ಪತ್ತೆಯಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರಿಗೆ ಮೊಮ್ಮಗನ ಮೇಲೆ ಅನುಮಾನ ಮೂಡಿತ್ತು. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹಣದ ಆಸೆಗೆ ಅಜ್ಜಿಯನ್ನೇ ಕೊಂದಿರುವ ಭೀಕರ ಸತ್ಯ ಬಯಲಾಗಿದೆ.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಆರೋಪಿ ಭೀಮಪ್ಪ ಕೊಲೆ ಮಾಡಿರುವುದನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.






















