SK Home Ad
Home ಕ್ರೀಡೆ IPL 2027: ಪಾಂಡ್ಯಗೆ ಪಂಜಾಬ್ ಪ್ರೀತಿ, ಮುಂಬೈಗೆ ಅರ್ಶದೀಪ್ ಬಲ!

IPL 2027: ಪಾಂಡ್ಯಗೆ ಪಂಜಾಬ್ ಪ್ರೀತಿ, ಮುಂಬೈಗೆ ಅರ್ಶದೀಪ್ ಬಲ!

0
37

ಮುಂಬೈ: ಐಪಿಎಲ್ 2027ರ ಆವೃತ್ತಿಗೂ ಮುನ್ನ ಆಟಗಾರರ ವರ್ಗಾವಣೆ ಪ್ರಕ್ರಿಯೆ ಜೋರಾಗಿದ್ದು, ಮುಂಬೈ ಇಂಡಿಯನ್ಸ್ ತಂಡದಿಂದ ಹಾರ್ದಿಕ್ ಪಾಂಡ್ಯ ಪಂಜಾಬ್ ಕಿಂಗ್ಸ್ ತಂಡಕ್ಕೆ ವರ್ಗಾವಣೆಯಾಗಿದ್ದಾರೆ. ಮತ್ತೊಂದೆಡೆ, ಪಂಜಾಬ್ ಕಿಂಗ್ಸ್ ತಂಡದ ಪ್ರಮುಖ ಎಡಗೈ ವೇಗದ ಬೌಲರ್ ಅರ್ಶದೀಪ್ ಸಿಂಗ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಈ ವರ್ಗಾವಣೆಯನ್ನು ಮುಂಬೈ ಇಂಡಿಯನ್ಸ್ ಬುಧವಾರ ಅಧಿಕೃತವಾಗಿ ಖಚಿತಪಡಿಸಿದೆ.

ಹಾರ್ದಿಕ್ ಪಾಂಡ್ಯ ಅವರ ನಿರ್ಗಮನದ ಕುರಿತು ಪ್ರತಿಕ್ರಿಯಿಸಿರುವ ಮುಂಬೈ ಇಂಡಿಯನ್ಸ್ ಮಾಲೀಕ ಆಕಾಶ್ ಅಂಬಾನಿ, ತಂಡಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದ್ದಾರೆ. 2015ರಲ್ಲಿ ಯುವ ಆಟಗಾರನಾಗಿ ಮುಂಬೈ ತಂಡಕ್ಕೆ ಸೇರ್ಪಡೆಯಾಗಿದ್ದ ಹಾರ್ದಿಕ್, ಬಳಿಕ ವಿಶ್ವದ ಪ್ರಮುಖ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿ ಬೆಳೆದಿದ್ದರು. 2024ರಲ್ಲಿ ತಂಡದ ನಾಯಕನಾಗಿ ಮರಳುವ ಮುನ್ನ ಮುಂಬೈ ಇಂಡಿಯನ್ಸ್ ನಾಲ್ಕು ಬಾರಿ ಐಪಿಎಲ್ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಹಾರ್ದಿಕ್ ಅವರ ಕ್ರಿಕೆಟ್ ಬೆಳವಣಿಗೆ, ನಾಯಕತ್ವದ ಗುಣ ಹಾಗೂ ಮೈದಾನದಲ್ಲಿ ತೋರುತ್ತಿದ್ದ ಸ್ಪರ್ಧಾತ್ಮಕ ಮನೋಭಾವವನ್ನು ಆಕಾಶ್ ಅಂಬಾನಿ ಶ್ಲಾಘಿಸಿದ್ದಾರೆ. ಅವರ ಕೊಡುಗೆ ಮತ್ತು ತಂಡದೊಂದಿಗಿನ ಸ್ಮರಣೀಯ ಕ್ಷಣಗಳಿಗಾಗಿ ಧನ್ಯವಾದ ಸಲ್ಲಿಸಿರುವ ಅವರು, ಮುಂದಿನ ಕ್ರಿಕೆಟ್ ಪಯಣಕ್ಕೆ ಶುಭ ಹಾರೈಸಿದ್ದಾರೆ.

ಮುಂಬೈ ಬೌಲಿಂಗ್ ವಿಭಾಗಕ್ಕೆ ಅರ್ಶದೀಪ್ ಬಲ: ಇನ್ನೊಂದೆಡೆ, ಅರ್ಶದೀಪ್ ಸಿಂಗ್ ಅವರ ಸೇರ್ಪಡೆಯಿಂದ ಮುಂಬೈ ಇಂಡಿಯನ್ಸ್ ಬೌಲಿಂಗ್ ವಿಭಾಗ ಮತ್ತಷ್ಟು ಬಲಿಷ್ಠವಾಗಲಿದೆ ಎಂಬ ವಿಶ್ವಾಸವನ್ನು ಆಕಾಶ್ ಅಂಬಾನಿ ವ್ಯಕ್ತಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಅರ್ಶದೀಪ್, ವಿಭಿನ್ನ ಪಿಚ್ ಹಾಗೂ ಪಂದ್ಯದ ಸನ್ನಿವೇಶಗಳಿಗೆ ಹೊಂದಿಕೊಂಡು ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಅವರ ಅನುಭವ, ಕೌಶಲ ಮತ್ತು ಸ್ಪರ್ಧಾತ್ಮಕ ಮನೋಭಾವ ತಂಡದ ಬೌಲಿಂಗ್ ವಿಭಾಗಕ್ಕೆ ಹೆಚ್ಚಿನ ಬಲ ಹಾಗೂ ವೈವಿಧ್ಯತೆಯನ್ನು ಒದಗಿಸಲಿದೆ ಎಂದು ಅವರು ಹೇಳಿದ್ದಾರೆ.

ಅರ್ಷದೀಪ್ ಅವರನ್ನು ಮುಂಬೈ ಇಂಡಿಯನ್ಸ್ ಕುಟುಂಬಕ್ಕೆ ಸ್ವಾಗತಿಸಿರುವ ಆಕಾಶ್ ಅಂಬಾನಿ, ತಂಡದ ನೀಲಿ ಮತ್ತು ಚಿನ್ನದ ಬಣ್ಣದ ಜೆರ್ಸಿಯಲ್ಲಿ ಅವರನ್ನು ಕಣಕ್ಕಿಳಿಯುವುದನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.

ನಾಯಕತ್ವದ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ: ಇನ್ನು ಹಾರ್ದಿಕ್ ಪಾಂಡ್ಯ ನಿರ್ಗಮನದ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ತಂಡದ ಮುಂದಿನ ನಾಯಕ ಯಾರು ಎಂಬ ಕುತೂಹಲವೂ ಹೆಚ್ಚಾಗಿದೆ. ಮುಂಬರುವ ಆವೃತ್ತಿಗೆ ತಂಡವನ್ನು ಸಜ್ಜುಗೊಳಿಸುವ ಪ್ರಕ್ರಿಯೆಯಲ್ಲಿ ನಾಯಕತ್ವದ ಆಯ್ಕೆಯನ್ನು ಎಚ್ಚರಿಕೆಯಿಂದ ಪರಿಶೀಲಿಸಲಾಗುವುದು. ಈ ಕುರಿತು ಸೂಕ್ತ ಸಮಯದಲ್ಲಿ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಫ್ರಾಂಚೈಸಿ ಸ್ಪಷ್ಟಪಡಿಸಿದೆ.