ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಮತ್ತೆ ಗುಂಡಿನ ಸದ್ದು ಮಾಡಿದ್ದು, ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಕುಲ್ಗಾಮ್ ಜಿಲ್ಲೆಯ ಅಖ್ರಾನ್ ಪ್ರದೇಶದಲ್ಲಿ ಸಿಆರ್ಪಿಎಫ್ ಸಿಬ್ಬಂದಿಯನ್ನು ಗುರಿಯಾಗಿಸಿ ಉಗ್ರರು ನಡೆಸಿದ ಗುಂಡಿನ ದಾಳಿ, ಮೂವರು ಯೋಧರನ್ನು ಗಾಯಗೊಳಿಸಿದೆ.
ಮೋಟಾರ್ಸೈಕಲ್ನಲ್ಲಿ ಬಂದಿದ್ದ ಶಂಕಿತ ಉಗ್ರರು ಮೀರಬಜಾರ್ ಸಮೀಪದ ಚೆಕ್ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಮೇಲೆ ಏಕಾಏಕಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಕೂಡಲೇ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿ ಪ್ರತಿದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಕಾಶ್ಮೀರದಲ್ಲಿ ಇತ್ತೀಚಿನ ದಿನಗಳಲ್ಲಿ ಉಗ್ರರ ದಾಳಿಗಳು ಭದ್ರತಾ ವ್ಯವಸ್ಥೆಗೆ ಸವಾಲಾಗಿವೆ. ಕಳೆದ ಜುಲೈ ಅಂತ್ಯದಲ್ಲಿ ಕುಲ್ಗಾಮ್ ಜಿಲ್ಲೆಯಲ್ಲೇ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ ಇಬ್ಬರು ವಲಸೆ ಕಾರ್ಮಿಕರು ಮೃತಪಟ್ಟಿದ್ದರು. ಈ ಘಟನೆಯ ಬಳಿಕ ದಕ್ಷಿಣ ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಉಗ್ರರ ಜಾಲ ಪತ್ತೆಗಾಗಿ ಕಾರ್ಯಾಚರಣೆ ತೀವ್ರಗೊಳಿಸಿದ್ದವು.
ಇದಕ್ಕೂ ಮೊದಲು 2025ರ ಏಪ್ರಿಲ್ನಲ್ಲಿ ಪಹಲ್ಗಾಮ್ನ ಬೈಸರನ್ ಕಣಿವೆಯಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆದ ಭೀಕರ ಉಗ್ರರ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಈ ಘಟನೆ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಜಮ್ಮು ಪ್ರದೇಶದ ರಿಯಾಸಿ ಸೇರಿದಂತೆ ಹಲವು ಕಡೆ ಉಗ್ರರ ದಾಳಿಗಳು ಭದ್ರತಾ ಪಡೆಗಳಿಗೆ ಸವಾಲೊಡ್ಡಿದ್ದವು.
ಇದೀಗ ಕುಲ್ಗಾಮ್ನಲ್ಲಿ ಸಿಆರ್ಪಿಎಫ್ ಸಿಬ್ಬಂದಿಯ ಮೇಲಿನ ದಾಳಿ ಮತ್ತೆ ಭದ್ರತಾ ಆತಂಕವನ್ನು ಹೆಚ್ಚಿಸಿದೆ. ದಾಳಿಕೋರರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ದಕ್ಷಿಣ ಕಾಶ್ಮೀರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.



















