SK Home Ad
Home ನಮ್ಮ ಜಿಲ್ಲೆ ಬಾಗಲಕೋಟೆ ಮನ ಸೆಳೆವ ಮಣ್ಣಿನ ಆಕಾಶ ಬುಟ್ಟಿಗಳು, ಹಣತೆಗಳು…

ಮನ ಸೆಳೆವ ಮಣ್ಣಿನ ಆಕಾಶ ಬುಟ್ಟಿಗಳು, ಹಣತೆಗಳು…

0
2

ಮಲ್ಲಿಕಾರ್ಜುನ ತುಂಗಳ
ಬಾಗಲಕೋಟೆ: ರಬಕವಿ ನಗರದ ಹೊರ ವಲಯದ ಮಹಾಲಿಂಗಪುರ ರಸ್ತೆಯಲ್ಲಿ ದೀಪಾವಳಿ ಹಬ್ಬದ ಪ್ರಯಕ್ತ ತರಹೇವಾರಿ ಮಣ್ಣಿನ ಹಣತೆಗಳು ಇವುಗಳ ಜೊತೆಗೆ ಮಣ್ಣಿನಿಂದ ತಯಾರು ಮಾಡಿದ ಆಕಾಶ ಬುಟ್ಟಿಗಳು ಗಮನ ಸೆಳೆಯುತ್ತಿವೆ.

ಇಲ್ಲಿನ ಮಣ್ಣಿನ ಆಕಾಶ ಬುಟ್ಟಿಗಳು ಅತ್ಯಂತ ಆಕರ್ಷಕವಾಗಿವೆ. ಗಡಿಗೆಯ ರೂಪದಲ್ಲಿರುವ ಇವುಗಳನ್ನು ಆಕರ್ಷಕವಾಗಿ ಡಿಸೈನ್ ಮಾಡಲಾಗಿದೆ. ಅಂದಾರು ರೂ. 500 ರಿಂದ ರೂ. 600 ರವರೆಗೆ ಮಾರಾಟಗೊಳ್ಳುತ್ತಿವೆ.

ಅದೇ ರೀತಿಯಾಗಿ ತರಹೇವಾರಿ ಹಣತೆಗಳು ಗಮನ ಸೆಳೆದಿವೆ. ಇಲ್ಲಿ ರೂ. 10 ರೂ. 100 ಮತ್ತು ರೂ. 300 ಹಣತೆಗಳನ್ನು ಮಾರಾಟ ಮಾಡಲಾಗುತ್ತಿದೆ. ಗಣೇಶ ವಿಗ್ರಹದ ಹಣತೆ, ಬಾತುಕೋಳಿ ಹಣತೆ, ಐದು ಹಣತೆಗಳನ್ನು ಜೋಡಿಸಲಾಗಿದ್ದು, ಮಣ್ಣಿನ ಆರತಿಗಳು, ತೂಗಿ ಬಿಡುವ ಹಣತೆಗಳು ಸೇರಿದಂತೆ ಹಲವಾರು ರೀತಿಯ ದೀಪಗಳನ್ನು ಮಾರಾಟ ಮಾಡಲಾಗುತ್ತಿದೆ.

ಈ ದೀಪಗಳನ್ನು ಬೆಳಗಾವಿಯಲ್ಲಿ ತಯಾರು ಮಾಡಿಸುತ್ತಿದ್ದೇವೆ. ಈ ಹಣತೆಗಳನ್ನು ತಯಾರು ಮಾಡಲು ಬೈಲಹೊಂಗಲದ ಹತ್ತಿರದ ಮುರಗೋಡದಿಂದ ಮಣ್ಣನ್ನು ತರಿಸುತ್ತೇವೆ. ತಿಗರಿಯ ಮೇಲೆ ದೀಪಗಳನ್ನು ತಯಾರು ಮಾಡಿದ ನಂತರ ಅವುಗಳನ್ನು ಸುಡಲಾಗುವುದು. ದೀಪಗಳನ್ನು ವ್ಯವಸ್ಥಿತವಾಗಿ ಸುಡುವುದರ ಮೂಲಕ ಅವು ಕೆಂಪು ಬಣ್ಣಕ್ಕೆ ಬರುತ್ತವೆ. ಇಲ್ಲಿ ಅವುಗಳನ್ನು ಸುಡುವುದು ಮುಖ್ಯವಾಗಿದೆ. ನಂತರ ದೀಪಗಳಲ್ಲಿರುವ ಗಣೇಶ, ಸರಸ್ವತಿ ವಿಗ್ರಹಗಳನ್ನು ಮನೆಯಲ್ಲಿ ಕೈಯಿಂದ ಮಾಡಿದ ನಂತರ ಅವುಗಳನ್ನು ಅಂಟಿಸಲಾಗುವುದು. ಕೆಲವು ದೀಪಗಳಿಗೆ ನೈಸರ್ಗಿಕವಾದ ಕಾವಿ ಬಣ್ಣವನ್ನು ಕೂಡ ನೀಡಲಾಗುತ್ತದೆ ಎಂದು ಮಾಲೀಕರಾದ ಪ್ರಕಾಶ ಕುಂಬಾರ ತಿಳಿಸಿದರು.

ಇಲ್ಲಿ ಮಾರಾಟ ಮಾಡುತ್ತಿರುವ ಹಣತೆಗಳು ಕುಂಬಾರರು ಮಾಡಿದ ಹಣತೆಗಳಾಗಿದ್ದು, ದೀಪಾವಳಿಯ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ದೊರೆಯುವ ದೀಪಗಳಿಗಿಂತ ಇವು ಸುಂದರವಾಗಿ ಮತ್ತು ನಮ್ಮ ಸಂಪ್ರದಾಯಬದ್ಧವಾಗಿವೆ ಮತ್ತು ದೀಪಾವಳಿ ಹಬ್ಬಕ್ಕೆ ಅತ್ಯಂತ ಯೋಗ್ಯವಾಗಿವೆ ಎನ್ನುತ್ತಾರೆ ಪ್ರಕಾಶ ಕುಂಬಾರ.

ರಬಕವಿ ಮಹಾಲಿಂಗಪುರ ರಾಜ್ಯ ಹೆದ್ದಾರಿಯ ಮೂಲಕ ಬೇರೆ ಊರುಗಳಿಗೆ ಹೋಗುತ್ತಿರುವ ಜನರು ಈ ದೀಪಗಳನ್ನು ನೋಡಿ ತಿರುಗಿ ಬಂದು ಖರೀದಿಸುತ್ತಿದ್ದಾರೆ. ಈ ಭಾಗದಲ್ಲಿ ಇಂಥ ದೀಪಗಳು ದೊರೆಯುತ್ತಿರುವುದು ವಿಶೇಷವಾಗಿದೆ.