ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ʻದಿಮಾಗಿ ನಕ್ಸಲರುʼ (ಬೌದ್ಧಿಕ ನಕ್ಸಲರು) ಎಂಬ ಹೇಳಿಕೆ ನೀಡಿರುವುದಕ್ಕೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ದೇಶದ್ರೋಹಿಗಳು ಯಾರು? ವಿದೇಶಿ ಶಕ್ತಿಗಳ ನಿಯಂತ್ರಣದಲ್ಲಿ ಇರುವವರು ಯಾರು? ಎಂಬುದರ ಕುರಿತು ಪ್ರಧಾನಿ ಮೋದಿ ತಮ್ಮೊಂದಿಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಮತ್ತೊಮ್ಮೆ ಸವಾಲು ಹಾಕಿದ್ದಾರೆ.
ಈ ಕುರಿತು ಸೋಮವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಸಿಆರ್‌ಪಿಎಫ್ ಯೋಧರನ್ನು ಉದ್ದೇಶಿಸಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ʻಪ್ರಿಯ ಸಿಆರ್‌ಪಿಎಫ್ ಯೋಧರೇ, ನಿಮ್ಮ ಮುಖಭಾವವೇ ಎಲ್ಲವನ್ನೂ ಹೇಳುತ್ತಿತ್ತು. ಪ್ರಧಾನಿಯವರ ಸುಳ್ಳುಗಳನ್ನು ನೀವು ನಂಬಿಲ್ಲ ಎಂಬುದು ಸ್ಪಷ್ಟವಾಗಿತ್ತು. ಅವರು ನಮ್ಮನ್ನು ನಕ್ಸಲರು ಎಂದು ಕರೆದಿದ್ದಾರೆ. ನನ್ನ ಸವಾಲು ಈಗಲೂ ಹಾಗೆಯೇ ಇದೆ. ದೇಶದ್ರೋಹಿಗಳು ಯಾರು ಮತ್ತು ವಿದೇಶಿ ಶಕ್ತಿಗಳ ನಿಯಂತ್ರಣದಲ್ಲಿ ಇರುವವರು ಯಾರು ಎಂಬುದರ ಕುರಿತು ನನ್ನೊಂದಿಗೆ ಚರ್ಚೆ ನಡೆಸಲಿ. ಯಾವುದೇ ಸಮಯ, ಯಾವುದೇ ಸ್ಥಳದಲ್ಲಾದರೂ ಸಿದ್ಧ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ʻಚರ್ಚೆ ಮುಗಿದ ಬಳಿಕ ಪ್ರಧಾನಿ ಮೋದಿ ಯಾವುದೇ ಒಬ್ಬ ಯೋಧನ ಎದುರು ನಿಲ್ಲುವ ಧೈರ್ಯವನ್ನೂ ಹೊಂದಿರುವುದಿಲ್ಲ ಎಂಬುದು ನನ್ನ ಖಾತರಿ’ ಎಂದು ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಏನಿದು ವಿವಾದ?: ಭಾನುವಾರ ಛತ್ತೀಸ್‌ಗಢದ ಬಸ್ತರ್ ಜಿಲ್ಲೆಯ ಕರಣ್‌ಪುರದಲ್ಲಿರುವ ಸಿಆರ್‌ಪಿಎಫ್ ಶಿಬಿರಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಯೋಧರೊಂದಿಗೆ ದೀಪಾವಳಿ ಆಚರಿಸಿದ್ದರು. ಈ ವೇಳೆ ಮಾತನಾಡಿದ್ದ ಅವರು, ಸಶಸ್ತ್ರ ನಕ್ಸಲಿಸಂ ಅನ್ನು ಬಹುತೇಕ ನಿರ್ಮೂಲನೆ ಮಾಡಲಾಗಿದೆ. ಆದರೆ, ನಕ್ಸಲಿಸಂನ ಸೈದ್ಧಾಂತಿಕ ಬೆಂಬಲಿಗರಾದ ʻದಿಮಾಗಿ ನಕ್ಸಲರು’ ವಿವಿಧ ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳಲ್ಲಿ ನುಸುಳಿದ್ದಾರೆ ಎಂದು ಆರೋಪಿಸಿದ್ದರು.
ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವಿರುದ್ಧ ಜನರನ್ನು ಪ್ರಚೋದಿಸುತ್ತಿರುವ ಇಂತಹ ಶಕ್ತಿಗಳನ್ನು ಗುರುತಿಸಿ ಸೋಲಿಸಬೇಕು ಎಂದು ಕರೆ ನೀಡಿದ್ದರು.
ಪ್ರಧಾನಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ತಮ್ಮ ಮೇಲಿನ ಆರೋಪಗಳನ್ನು ಬಹಿರಂಗ ಚರ್ಚೆಯ ಮೂಲಕ ಎದುರಿಸಲು ಸಿದ್ಧವಿರುವುದಾಗಿ ಪುನರುಚ್ಚರಿಸಿದ್ದಾರೆ. ಈ ಮೂಲಕ ಮೋದಿ ಮತ್ತು ರಾಹುಲ್ ನಡುವಿನ ರಾಜಕೀಯ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದೆ.





















