ಹುಬ್ಬಳ್ಳಿ: ಸ್ಟಿಂಗ್ ಆಪರೇಷನ್ ವಿಚಾರ ಇಡೀ ರಾಜ್ಯವನ್ನೇ ತಲೆ ತಗ್ಗಿಸುವಂತೆ ಮಾಡಿದೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು. ಯಾವುದೇ ಪಕ್ಷದವರಾಗಿರಲಿ ಬ್ಲ್ಯಾಕ್ಮೇಲ್ ರಾಜಕಾರಣಿಗಳ ವಿರುದ್ಧ ಕಠಿಣ ಕಾನೂನು ಕ್ರಮವಾಗಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿದಿನ ಬೆಳಗಾದರೆ ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸ್ಟಿಂಗ್ ಆಪರೇಷನ್ನದ್ದೇ ಚರ್ಚೆ. `ಅವರದ್ದು ಸಿಡಿ ಇದೆಯಂತೆ, ಇವರದ್ದೂ ಪೆನ್ಡ್ರೈವ್ ಇದೆಯಂತೆ’ ಎಂಬ ಅಸಹ್ಯ ರಾಜ್ಯದ ಜನರನ್ನು ತಲೆ ತಗ್ಗಿಸುವಂತೆ ಮಾಡಿದೆ. ಮನೆಯಲ್ಲಿ ಕುಟುಂಬದ ಎಲ್ಲ ಜನರು ನ್ಯೂಸ್ ಚಾನಲ್ ನೋಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕರ್ನಾಟಕದ ಗೌರವಕ್ಕೆ ಚ್ಯುತಿ ಬರುತ್ತಿದೆ. ತನಿಖೆಯಿಂದಲೇ ಸತ್ಯಾಸತ್ಯತೆ ಹೊರ ಬರಬೇಕಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ಘೋಷಿಸಿದ್ದಾರೆ. ರಾಜ್ಯ ಇದೇ ರೀತಿ ಬ್ಲ್ಯಾಕ್ಮೇಲ್ ರಾಜಕಾರಣದಲ್ಲೇ ಮುಂದುವರಿದರೆ ಯಾವ ಸಭ್ಯ ಕುಟುಂಬದ ಹೆಣ್ಣು ಮಕ್ಕಳೂ ರಾಜಕಾರಣಕ್ಕೆ ಬರುವುದಿಲ್ಲ ಎಂದು ಎಚ್ಚರಿಸಿದರು.
ಹರೀಶ್ ದ್ವಿವೇದಿ ಹೇಳಿಕೆಗೆ ಉತ್ತರಿಸಿದ ಅವರು, ಒಬ್ಬ ಯುವಕನಾಗಿ ನಾನೂ ಕೂಡ ಅವರ ಹೇಳಿಕೆಯನ್ನು ಬೆಂಬಲಿಸುತ್ತೇನೆ. ಕೇವಲ ಬಿಜೆಪಿ ಒಂದೇ ಅಲ್ಲ. ಎಲ್ಲ ರಾಜಕೀಯ ಪಕ್ಷಗಳಲ್ಲೂ ಯುವಕರಿಗೆ ಅವಕಾಶ ದೊರೆಯಬೇಕು. ರಾಜಕೀಯ ಕುಟುಂಬದಿಂದ ಬಾರದೇ ಇರುವಂತಹ ಸಾಮಾನ್ಯ ಯುವಕರಿಗೂ ಅವಕಾಶ ಸಿಗಬೇಕು. ಅದನ್ನೇ ಹರೀಶ್ ದ್ವಿವೇದಿ ಅವರು ಸಭೆಯಲ್ಲಿ ಹೇಳಿದ್ದಾರೆ. ಅದಕ್ಕೆ ನನ್ನ ಬೆಂಬಲ ಇದೆ ಎಂದರು.




















