SK Home Ad
Home ನಮ್ಮ ಜಿಲ್ಲೆ ಬೆಂಗಳೂರು ಪ್ರಯಾಣಿಕರಿಗೆ ಗುಡ್‌ನ್ಯೂಸ್: ನ. 13ಕ್ಕೆ ನಮ್ಮ ಮೆಟ್ರೋ ಹೊಸ ಸೇವೆ?

ಪ್ರಯಾಣಿಕರಿಗೆ ಗುಡ್‌ನ್ಯೂಸ್: ನ. 13ಕ್ಕೆ ನಮ್ಮ ಮೆಟ್ರೋ ಹೊಸ ಸೇವೆ?

0
110

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರ ಬಹುದಿನಗಳ ಕಾಯುವಿಕೆಗೆ ಕೊನೆಗೂ ತೆರೆ ಬೀಳುವ ಕಾಲ ಸಮೀಪಿಸಿದೆ. ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿರೀಕ್ಷೆ ಮೂಡಿಸಿರುವ ಗುಲಾಬಿ ಮಾರ್ಗದ ಮೊದಲ ಹಂತದಲ್ಲಿ ನವೆಂಬರ್ 13ರಿಂದ ಮೆಟ್ರೋ ರೈಲು ಓಡಾಟ ಆರಂಭವಾಗುವ ಸಾಧ್ಯತೆ ಇದೆ. ಈ ಕುರಿತು ಸಂಸದ ತೇಜಸ್ವಿ ಸೂರ್ಯ ಸುಳಿವು ನೀಡಿದ್ದು, ಮೆಟ್ರೋ ಪ್ರಯಾಣಿಕರಲ್ಲಿ ಹೊಸ ನಿರೀಕ್ಷೆ ಮೂಡಿದೆ.

ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಸಂಪರ್ಕ ಕಲ್ಪಿಸುವ 21.26 ಕಿ.ಮೀ. ಉದ್ದದ ಗುಲಾಬಿ ಮಾರ್ಗದ ಕಾಮಗಾರಿ ಹಂತ ಹಂತವಾಗಿ ಪೂರ್ಣಗೊಳ್ಳುತ್ತಿದೆ. ಒಟ್ಟು ಮಾರ್ಗದಲ್ಲಿ 13.76 ಕಿ.ಮೀ. ಸುರಂಗ ಮಾರ್ಗವಾಗಿದ್ದರೆ, ಉಳಿದ ಭಾಗ ಎಲಿವೇಟೆಡ್ ಮಾರ್ಗವಾಗಿದೆ.

ಸದ್ಯ ಕಾಳೇನ ಅಗ್ರಹಾರದಿಂದ ತಾವರೆಕೆರೆ ನಡುವಿನ 7.5 ಕಿ.ಮೀ. ಎಲಿವೇಟೆಡ್ ಮಾರ್ಗ ರೈಲು ಸಂಚಾರಕ್ಕೆ ಸಿದ್ಧವಾಗಿದೆ. ಈ ವಿಭಾಗಕ್ಕೆ ರೈಲ್ವೆ ಸುರಕ್ಷತಾ ಆಯುಕ್ತರು ಕೂಡ ಹಸಿರು ನಿಶಾನೆ ನೀಡಿರುವುದರಿಂದ ವಾಣಿಜ್ಯ ಸಂಚಾರ ಆರಂಭಕ್ಕೆ ಇದ್ದ ಪ್ರಮುಖ ಅಡೆತಡೆ ನಿವಾರಣೆಯಾಗಿದೆ.

ಆರು ನಿಲ್ದಾಣಗಳಲ್ಲಿ ರೈಲು ಓಡಾಟ: ಮೊದಲ ಹಂತದಲ್ಲಿ ಆರು ನಿಲ್ದಾಣಗಳ ನಡುವೆ ಮೆಟ್ರೋ ಸೇವೆ ಲಭ್ಯವಾಗಲಿದೆ. ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ, ಜೆ.ಪಿ. ನಗರ 4ನೇ ಹಂತ, ಜಯದೇವ ಆಸ್ಪತ್ರೆ ಹಾಗೂ ತಾವರೆಕೆರೆ ನಿಲ್ದಾಣಗಳು ಈ ಮಾರ್ಗದಲ್ಲಿವೆ.

ಈ ಪೈಕಿ ಜಯದೇವ ಆಸ್ಪತ್ರೆ ನಿಲ್ದಾಣವು ವಿಶೇಷ ಮಹತ್ವ ಹೊಂದಿದೆ. ಈಗಾಗಲೇ ಕಾರ್ಯಾಚರಣೆಯಲ್ಲಿರುವ ಹಳದಿ ಮಾರ್ಗ ಮತ್ತು ಹೊಸ ಗುಲಾಬಿ ಮಾರ್ಗವನ್ನು ಇದು ಸಂಪರ್ಕಿಸಲಿದ್ದು, ಪ್ರಯಾಣಿಕರಿಗೆ ಮಾರ್ಗ ಬದಲಾಯಿಸಲು ಅನುಕೂಲವಾಗಲಿದೆ.

ಮುಂದಿನ ದಿನಗಳಲ್ಲಿ ನಾಗವಾರದವರೆಗಿನ ಸಂಪೂರ್ಣ ಮಾರ್ಗ ಕಾರ್ಯಾರಂಭ ಮಾಡಿದರೆ ದಕ್ಷಿಣ ಬೆಂಗಳೂರಿನಿಂದ ಉತ್ತರ ಬೆಂಗಳೂರಿಗೆ ಮೆಟ್ರೋ ಸಂಪರ್ಕ ಮತ್ತಷ್ಟು ಸುಲಭವಾಗಲಿದೆ. ಸದ್ಯ ಮೊದಲ ಹಂತದ ಸಂಚಾರ ಆರಂಭದ ದಿನಾಂಕದ ಬಗ್ಗೆ ಸಂಸದ ತೇಜಸ್ವಿ ಸೂರ್ಯ ನೀಡಿರುವ ಸುಳಿವು ಪ್ರಯಾಣಿಕರ ಗಮನ ಸೆಳೆದಿದೆ.