ಹಾವೇರಿ: ಗ್ರಾಮ ಆಡಳಿತ ಅಧಿಕಾರಿ (ವಿಎಒ) ನೇಮಕಾತಿ ಪರೀಕ್ಷೆಯಲ್ಲಿ ಮೊಬೈಲ್ ಬಳಸಿ ಅಕ್ರಮ ಎಸಗಿದ ಆರೋಪದಡಿ, ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದಿದ್ದ ಹಾನಗಲ್ನ ಶಂಕರ ಬಸವರಾಜ ಬನ್ನೂರ ವಿರುದ್ಧ ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಸೂಚನೆ ಮೇರೆಗೆ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ನಿರ್ದೇಶನದಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದ ಸವಣೂರು ಉಪವಿಭಾಗಾಧಿಕಾರಿ ಸಮೀರ ಪ್ರಕಾಶ ಖೋಡೆ ಅವರು ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪರಿಶೀಲನೆ ನಡೆಸಿದ ಪೊಲೀಸರು, ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ 2023ರ ಪರೀಕ್ಷಾ ಅಕ್ರಮ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಂಕರ ಬಸವರಾಜ ಬನ್ನೂರ ಅ. 4ರಂದು ಶಿಗ್ಗಾವಿಯ ಬಿ.ಬಿ. ಮಾಮ್ಲದೇಸಾಯಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಡೆದ ವಿಎಒ ನೇಮಕಾತಿ ಪರೀಕ್ಷೆಗೆ ಹಾಜರಾಗಿದ್ದರು. ಬೆಳಿಗ್ಗೆ ಮತ್ತು ಮಧ್ಯಾಹ್ನದ ಎರಡೂ ಅವಧಿಯ ಪರೀಕ್ಷೆಗಳಲ್ಲಿ ಮೊಬೈಲ್ನಂತಹ ಎಲೆಕ್ಟಾçನಿಕ್ ಸಾಧನವನ್ನು ಪರೀಕ್ಷಾ ಕೊಠಡಿಯೊಳಗೆ ಕೊಂಡೊಯ್ದು, ಪ್ರಶ್ನೆಪತ್ರಿಕೆಯ ಫೋಟೊ ತೆಗೆದು ಉತ್ತರಗಳನ್ನು ಕಂಡುಕೊಂಡು ಒಎಂಆರ್ ಪ್ರತಿಯಲ್ಲಿ ಉತ್ತರಗಳನ್ನು ಭರ್ತಿ ಮಾಡಿದ್ದಾರೆ. ಈ ರೀತಿಯಲ್ಲಿ ಅಕ್ರಮವಾಗಿ ಪರೀಕ್ಷೆ ಬರೆದು 200 ಅಂಕಗಳಿಗೆ 151.25 ಅಂಕಗಳನ್ನು ಪಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅ. 4ರಂದು ನಡೆದ ವಿಎಒ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಶಂಕರ ಬನ್ನೂರು 151.25 ಅಂಕ ಗಳಿಸಿದ್ದ. ಆದರೆ, ಸೆ. 20ರಂದು ನಡೆದ ಕೆಎಸ್ಆರ್ಪಿ ಕಾನ್ಸ್ಟೆಬಲ್ ನೇಮಕಾತಿ ಪರೀಕ್ಷೆಯಲ್ಲಿ ಕೇವಲ 25 ಅಂಕ ಪಡೆದಿದ್ದ. ಎರಡು ಪರೀಕ್ಷೆಗಳ ಅಂಕಗಳಲ್ಲಿ ಕಂಡುಬಂದ ಭಾರಿ ವ್ಯತ್ಯಾಸ ಅನುಮಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸೂಚನೆಯಂತೆ ಪರೀಕ್ಷಾ ಕೇಂದ್ರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಅಭ್ಯರ್ಥಿ ಮೊಬೈಲ್ ಬಳಸಿ ಗೂಗಲ್ ಲೆನ್ಸ್ ಮೂಲಕ ಪ್ರಶ್ನೆಪತ್ರಿಕೆಯನ್ನು ಸ್ಕ್ಯಾನ್ ಮಾಡಿ ಉತ್ತರಗಳನ್ನು ಹುಡುಕಿರುವುದು ಬೆಳಕಿಗೆ ಬಂದಿದೆ.



















