ಕಲಬುರಗಿ: ಬೆಂಗಳೂರಿನಲ್ಲಿ ಭಾನುವಾರ ಬೆಳಿಗ್ಗೆ ಲೋಕಾರ್ಪಣೆಗೊಂಡ ಬಹುನಿರೀಕ್ಷಿತ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿಗೆ ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ರಾತ್ರಿ ಅದ್ದೂರಿ ಸ್ವಾಗತ ನೀಡಲಾಯಿತು.
ಬೆಂಗಳೂರಿನಿಂದ ಮುಂಬೈ ಕಡೆಗೆ ತನ್ನ ಮೊದಲ ಪ್ರಯಾಣ ಆರಂಭಿಸಿದ ಈ ರೈಲು, ನಿಗದಿತ ವೇಳಾಪಟ್ಟಿಯಂತೆ ರಾತ್ರಿ 9.28ಕ್ಕೆ ಕಲಬುರಗಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿತು. ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆಯೇ ರೈಲ್ವೆ ಅಧಿಕಾರಿಗಳು ಹಾಗೂ ಸಿಬ್ಬಂದಿ ರೈಲನ್ನು ಬರಮಾಡಿಕೊಂಡರು. ಹೊಸ ರೈಲಿನ ಆಗಮನದ ಹಿನ್ನೆಲೆಯಲ್ಲಿ ನಿಲ್ದಾಣದಲ್ಲಿ ವಿಶೇಷ ಸಡಗರ, ಸಂಭ್ರಮದ ವಾತಾವರಣ ಕಂಡುಬಂದಿತು.
ಕಲಬುರಗಿ ನಿಲ್ದಾಣದಲ್ಲಿ ರೈಲು ಕೇವಲ ಎರಡು ನಿಮಿಷಗಳ ಕಾಲ ಮಾತ್ರ ನಿಲುಗಡೆ ಹೊಂದಿತ್ತು. ಈ ಅವಧಿಯಲ್ಲಿ ಮಧ್ಯ ರೈಲ್ವೆಯ ಸೋಲಾಪುರ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್ ಎಂ) ಡಾ. ಸುಜಿತ್ ಮಿಶ್ರಾ, ಹಿರಿಯ ವಾಣಿಜ್ಯ ವ್ಯವಸ್ಥಾಪಕ ಜಯದೀಪ್ ಪ್ರದಕ್ಷಿಣೆ, ಮತ್ತಿತರ ಅಧಿಕಾರಿಗಳು ರೈಲನ್ನು ಸ್ವಾಗತಿಸಿ, ಹಸಿರು ನಿಶಾನೆ ತೋರಿದ ಬಳಿಕ ರೈಲು ಮುಂಬೈ ಕಡೆಗೆ ತನ್ನ ಮುಂದಿನ ಪ್ರಯಾಣವನ್ನು ಮುಂದುವರಿಸಿತು.
ಶಾಸಕ ಡಾ. ಅವಿನಾಶ್ ಜಾಧವ, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ. ನಮೋಶಿ, ಬಿ.ಜಿ. ಪಾಟೀಲ್, ಮೇಯರ್ ಸಯ್ಯದ್ ಅಜ್ಮಲ್ ಗೋಲಾ, ಜಿಲ್ಲಾಧಿಕಾರಿ ಇಕ್ರಂ ಶರೀಫ್, ನಗರ ಪೊಲೀಸ್ ಆಯುಕ್ತ ಡಾ. ಡಿ ಎಸ್ ಶರಣಪ್ಪ, ಡಿ ಆರ್ ಯು ಸಿ ಸಿ ಸದಸ್ಯ ಶಾಂತರೆಡ್ಡಿ ಪೇಠಶಿರೂರ, ಕೆಕೆಸಿಸಿಐ ಅಧ್ಯಕ್ಷ ಶರಣು ಪಪ್ಪಾ, ಬಿಜೆಪಿ ಮುಖಂಡ ಶಿವರಾಜ ಪಾಟೀಲ್ ರದ್ದೇವಾಡಗಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಬೆಂಗಳೂರು ಮತ್ತು ಮುಂಬೈ ನಡುವಿನ ಪ್ರಮುಖ ರೈಲು ಸಂಪರ್ಕ ಮಾರ್ಗದಲ್ಲಿ ವಂದೇ ಭಾರತ್ ಸ್ಲೀಪರ್ ರೈಲಿನ ಪರಿಚಯವು ಮಹತ್ವದ ಬೆಳವಣಿಗೆಯಾಗಿದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ರೈಲ್ವೆ ಕೇಂದ್ರವಾಗಿರುವ ಕಲಬುರಗಿಯ ಮೂಲಕ ಈ ರೈಲು ಸಂಚರಿಸುತ್ತಿರುವುದು ಈ ಭಾಗದ ರೈಲ್ವೆ ಸಂಪರ್ಕದ ದೃಷ್ಟಿಯಿಂದ ಗಮನಾರ್ಹವಾಗಿದೆ.
ವಂದೇ ಭಾರತ್ ಸ್ಲೀಪರ್ ರೈಲು ದೂರ ಪ್ರಯಾಣಿಕರಿಗೆ ಆಧುನಿಕ ಸೌಲಭ್ಯಗಳೊಂದಿಗೆ ಆರಾಮದಾಯಕ ರಾತ್ರಿ ಪ್ರಯಾಣದ ಅನುಭವ ಒದಗಿಸುವ ಉದ್ದೇಶ ಹೊಂದಿದೆ. ದೇಶದ ರೈಲ್ವೆ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ಪ್ರಯಾಣಿಕ ಸ್ನೇಹಿ ಸೌಲಭ್ಯಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಈ ರೈಲು ಸೇವೆ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.
ಬೆಂಗಳೂರು-ಮುಂಬೈ ಮಾರ್ಗದಲ್ಲಿ ಸಂಚರಿಸುವ ಈ ಹೊಸ ರೈಲಿನ ಆಗಮನದಿಂದ ಕಲಬುರಗಿ ಸೇರಿದಂತೆ ಮಾರ್ಗಮಧ್ಯದ ವಿವಿಧ ಪ್ರದೇಶಗಳ ರೈಲ್ವೆ ಸಂಪರ್ಕದ ಮಹತ್ವ ಮತ್ತಷ್ಟು ಹೆಚ್ಚಿದಂತಾಗಿದೆ.






















