SK Home Ad
Home ಕ್ರೀಡೆ ‘ಪಾಕಿಸ್ತಾನದಲ್ಲಿ ರಜಾದಿನ ಘೋಷಿಸಿ’: ಹಾಂಕಾಂಗ್ ಸಿಕ್ಸಸ್ ನಲ್ಲಿ ಭಾರತದ ವಿರುದ್ಧ ಗೆಲುವಿಗೆ ಬೀಗಿದ ಪ್ರಧಾನಿ ಶಹಬಾಜ್...

‘ಪಾಕಿಸ್ತಾನದಲ್ಲಿ ರಜಾದಿನ ಘೋಷಿಸಿ’: ಹಾಂಕಾಂಗ್ ಸಿಕ್ಸಸ್ ನಲ್ಲಿ ಭಾರತದ ವಿರುದ್ಧ ಗೆಲುವಿಗೆ ಬೀಗಿದ ಪ್ರಧಾನಿ ಶಹಬಾಜ್ ಷರೀಫ್ ಭರ್ಜರಿ ಟ್ರೋಲ್!

0
52

ಹಾಂಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಭಾರತದ ವಿರುದ್ಧ 4 ವಿಕೆಟ್ಗಳ ಅಂತರದ ಗೆಲುವು ಸಾಧಿಸಿದ್ದಕ್ಕೆ ಸಂಭ್ರಮಿಸಿ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಹಾಕಿದ್ದ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ನೆಟ್ಟಿಗರ ಲೇವಡಿಗೆ ತುತ್ತಾಗಿದ್ದಾರೆ.

ವಿಶ್ವಕಪ್ ಹಾಗೂ ಏಷ್ಯಾ ಕಪ್ ನಂತಹ ಐಸಿಸಿ ಮಹಾಕೂಟಗಳಲ್ಲಿ ಭಾರತದ ವಿರುದ್ಧ ಹೀನಾಯ ಸೋಲು ಕಾಣುವ ಪಾಕಿಸ್ತಾನ, ಯಾವುದೇ ಮಹತ್ವವಿಲ್ಲದ ಸಿಕ್ಸ್-ಎ-ಸೈಡ್ ಟೂರ್ನಿಯಲ್ಲಿ ಗೆದ್ದಿದ್ದಕ್ಕೇ ಪ್ರಧಾನಿ ಮಟ್ಟದಲ್ಲಿ ಇಷ್ಟೊಂದು ಸಂಭ್ರಮಿಸಬೇಕಾ ಎಂದು ಅಭಿಮಾನಿಗಳು ಕಾಲೆಳೆದಿದ್ದಾರೆ. “ಈ ಗೆಲುವಿನ ನೆನಪಿಗಾಗಿ ಪಾಕಿಸ್ತಾನದಲ್ಲಿ ರಾಷ್ಟ್ರೀಯ ರಜಾದಿನ ಘೋಷಿಸಿಬಿಡಿ” ಎಂದು ನೆಟ್ಟಿಗರು ಷರೀಫ್ ಅವರನ್ನು ಅಣಕವಾಡಿದ್ದಾರೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೃನಾಲ್ ಪಾಂಡ್ಯ ನೇತೃತ್ವದ ಭಾರತ ತಂಡ, ಶಶಾಂಕ್ ಸಿಂಗ್ ಬಾರಿಸಿದ ಸಿಡಿಲಬ್ಬರದ 40 ರನ್ (11 ಎಸೆತ) ಗಳ ನೆರವಿನಿಂದ ನಿಗದಿತ 6 ಓವರ್ಗಳಲ್ಲಿ 88/5 ರನ್ ಕಲೆಹಾಕಿತು. ರಾಹುಲ್ ತೆವಾಟಿಯಾ ಹಾಗೂ ಕೃನಾಲ್ ಇಬ್ಬರೂ ಗೋಲ್ಡನ್ ಡಕ್ ಆದದ್ದು ಭಾರತಕ್ಕೆ ಹಿನ್ನಡೆಯಾಯಿತು.

ಬಳಿಕ 89 ರನ್ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ, ಮೊದಲ ಓವರ್ನಲ್ಲೇ ಕೃನಾಲ್ ಪಾಂಡ್ಯ ಬೌಲಿಂಗ್ನಲ್ಲಿ ಸತತ 5 ಸಿಕ್ಸರ್ ಚಚ್ಚಿದ ನಾಯಕ ಅಬ್ಬಾಸ್ ಅಫ್ರಿದಿ (35 ರನ್, 8 ಎಸೆತ) ಹಾಗೂ ಖವಾಜಾ ನಫಾಯ್ (41* ರನ್, 12 ಎಸೆತ) ಅವರ ಅಬ್ಬರದಿಂದ ಕೇವಲ 3.5 ಓವರ್ಗಳಲ್ಲಿ ಗುರಿ ತಲುಪಿ ಜಯ ಸಾಧಿಸಿತು.

ಈ ಸಾಮಾನ್ಯ ಗೆಲುವಿನ ಬೆನ್ನಲ್ಲೇ ಪ್ರಧಾನಿ ಶಹಬಾಜ್ ಷರೀಫ್, “ಹಾಂಕಾಂಗ್ ಸಿಕ್ಸಸ್ 2026ರ ಆರಂಭಿಕ ಪಂದ್ಯದಲ್ಲಿ ಭಾರತದ ವಿರುದ್ಧ ಅದ್ಭುತ ಗೆಲುವು ಸಾಧಿಸಿದ ನಮ್ಮ ಹುಡುಗರಿಗೆ ಮತ್ತು ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿಗೆ ಅಭಿನಂದನೆಗಳು” ಎಂದು ಟ್ವೀಟ್ ಮಾಡಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಕ್ರೀಡಾಭಿಮಾನಿಗಳು, “ವಿಶ್ವಕಪ್ನಲ್ಲಿ ಸೋತು ಮುಖಭಂಗ ಅನುಭವಿಸಿದ ನಂತರ ಇಂತಹ ಸಣ್ಣ ಟೂರ್ನಿಗಳ ಗೆಲುವೇ ಇವರಿಗೆ ವಿಶ್ವಕಪ್ ಗೆದ್ದಷ್ಟೇ ಖುಷಿ ಕೊಡುತ್ತಿದೆ” ಎಂದು ಚಾಟಿ ಬೀಸಿದ್ದಾರೆ.