ಮುಂಬೈ: ಜುಲೈನಿಂದ ಸೆಪ್ಟೆಂಬರ್ಗೆ ಕೊನೆಯಾದ 2026ರ ಎರಡನೇ ತ್ರೈಮಾಸಿಕದಲ್ಲಿ ಜಿಯೋ ಪ್ಲಾಟ್ ಫಾರ್ಮ್ಸ್ ಕಂಪನಿಯು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 14ರಷ್ಟು ಹೆಚ್ಚಳದೊಂದಿಗೆ 8,389 ಕೋಟಿ ರೂಪಾಯಿ ಲಾಭ ಪಡೆದಿದೆ. ಇನ್ನು ಆದಾಯದ ವಿಚಾರಕ್ಕೆ ಬಂದರೆ ಶೇಕಡಾ 11.3ರಷ್ಟು ಹೆಚ್ಚು ಆದಾಯ ದಾಖಲಿಸಿ, 47,485 ಕೋಟಿ ರೂಪಾಯಿ ಪಡೆದುಕೊಂಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಕಂಪನಿಯ ಆದಾಯ 42,652 ಕೋಟಿ ರೂಪಾಯಿ ಬಂದಿತ್ತು.
ಈ ತ್ರೈಮಾಸಿಕದಲ್ಲಿ ಇಬಿಐಟಿಡಿಎ 21,879 ಕೋಟಿ ರೂಪಾಯಿಗೆ ಏರಿಕೆ ಕಂಡಿದೆ. ಜಿಎಸ್ ಟಿ ವಸೂಲಿ ಮಾಡಿದ ನಂತರದಲ್ಲಿ ಕಾರ್ಯಾಚರಣೆಗಳ ಮೂಲಕ ಬಂದಂಥ ಆದಾಯವು ಕಳೆದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಬಂದಿದ್ದ 36,332 ಕೋಟಿ ರೂಪಾಯಿಗೆ ಹೋಲಿಕೆ ಮಾಡಿದರೆ ಶೇಕಡಾ 11.4ರಷ್ಟು ಹೆಚ್ಚಳವಾಗಿ 40,475 ಕೋಟಿ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಬಂದಿದ್ದ ಒಟ್ಟಾರೆ ಆದಾಯ 36,986 ಕೋಟಿಗೆ ಹೋಲಿಸಿದಲ್ಲಿ 41,453 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ.
ವರ್ಷದ ಹಿಂದೆ ಇದೇ ಅವಧಿಯಲ್ಲಿ ಒಟ್ಟಾರೆ ಖರ್ಚು 27,049 ಕೋಟಿ ರೂಪಾಯಿ ಇದ್ದದ್ದು, 30,194 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ. ಹಣಕಾಸು ವರ್ಷ 27ರ ಪ್ರಥಮಾರ್ಧದಲ್ಲಿ ಜಿಯೋದ ಕಾರ್ಯಾಚರಣೆ ಮೂಲಕ ಬಂದ ಆದಾಯವು ಶೇಕಡಾ 11.6ರಷ್ಟು ಹೆಚ್ಚಳವಾಗಿ, ಕಳೆದ ವರ್ಷ ಇದೇ ಅವಧಿಯಲ್ಲಿ ಬಂದಿದ್ದ 71,364 ಕೋಟಿ ರೂಪಾಯಿ, ಈ ಬಾರಿ 79,648 ಕೋಟಿ ರೂಪಾಯಿ ಆಗಿದೆ. ತೆರಿಗೆ ನಂತರದ ಲಾಭವು ಶೇಕಡಾ 11.5ರಷ್ಟು ಮೇಲೇರಿ, ಕಳೆದ ವರ್ಷ ಇದೇ ಅವಧಿಯಲ್ಲಿ ಇದ್ದ 14,489 ಕೋಟಿ ರೂಪಾಯಿಯಿಂದ 16,151 ಕೋಟಿಗೆ ಮುಟ್ಟಿದೆ.
ಜಿಯೋ ಪ್ಲಾಟ್ ಫಾರ್ಮ್ಸ್ ಕಾರ್ಯನಿರ್ವಾಹಕ ನಿರ್ದೇಶಕರಾ ಆಕಾಶ್ ಅಂಬಾನಿ ಅವರು ಮಾತನಾಡಿ, “ನಮ್ಮ ಹೊಸ ಷೇರುದಾರರನ್ನು ಜಿಯೋ ಪ್ಲಾಟ್ ಫಾರ್ಮ್ಸ್ ಕುಟುಂಬಕ್ಕೆ ಸಂತೋಷವಾಗಿ ಬರಮಾಡಿಕೊಳ್ಳುತ್ತೇನೆ. ನಾವು ಲಿಸ್ಟೆಡ್ ಕಂಒನಿಯಾಗಿ ಹೊಸ ಯುಗಕ್ಕೆ ಪ್ರವೇಶ ಮಾಡಿದ್ದೇವೆ. ಈ ತ್ರೈಮಾಸಿಕದ ಫಲಿತಾಂಶವು ನಮ್ಮ 5ಜಿ ನೆಟ್ ವರ್ಕ್ ಬಲವನ್ನು ಮತ್ತು ನಮ್ಮ ಬ್ರಾಡ್ ಬ್ಯಾಂಡ್ ಹಾಗೂ ಡಿಜಿಟಲ್ ಸೇವೆಗಳನ್ನು ತಲುಪಿಸುವ ಸಾಮರ್ಥ್ಯವನ್ನು ಪ್ರತಿಫಲಿಸುತ್ತದೆ,” ಎಂದು ಹೇಳಿದ್ದಾರೆ.
“ಮುಂದಿನ ಪೀಳಿಗೆಯ ತಂತ್ರಜ್ಞಾನಗಳಲ್ಲಿ ಕಾಲಕ್ಕೆ ಮುಂಚಿತವಾಗಿ ಮಾಡಿದ ಹೂಡಿಕೆಯೇ ಕಳೆದ ಒಂದು ದಶಕದಲ್ಲಿ ಜಿಯೋದ ಯಶಸ್ಸಿನ ಅಡಿಪಾಯವಾಗಿದೆ. ಉಪಗ್ರಹ ಸಂವಹನ, 6ಜಿ ಬೌದ್ಧಿಕ ಆಸ್ತಿ ಮತ್ತು ನಮ್ಮ ಮೂಲ ಧ್ವನಿ ಹಾಗೂ ಡೇಟಾ ಸೇವೆಗಳಲ್ಲಿ ಅಳವಡಿಸಿರುವ ಕೃತಕ ಬುದ್ಧಿಮತ್ತೆ (AI) ಕ್ಷೇತ್ರಗಳಲ್ಲಿ ನಮ್ಮ ಸಾಮರ್ಥ್ಯಗಳನ್ನು ನಾವು ಮುಂದೆಯೂ ಬೆಳೆಸುತ್ತೇವೆ; ಆ ಮೂಲಕ ನಮ್ಮ ಎಲ್ಲ ಪಾಲುದಾರರಿಗೆ ಶಾಶ್ವತ ಮೌಲ್ಯವನ್ನು ಸೃಷ್ಟಿಸುತ್ತೇವೆ,” ಎಂದು ಅವರು ಹೇಳಿದರು.
ಜಿಯೋ ಪ್ಲಾಟ್ಫಾರ್ಮ್ಸ್ನ ಪ್ರತಿ ಬಳಕೆದಾರರ ಸರಾಸರಿ ಆದಾಯ (ARPU) ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಶೇ 3.5ರಷ್ಟು ಹೆಚ್ಚಾಗಿ ₹218.8ಕ್ಕೆ ತಲುಪಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದು ₹211.4 ಆಗಿತ್ತು. ಫಿಕ್ಸ್ಡ್ ಬ್ರಾಡ್ಬ್ಯಾಂಡ್ ಗ್ರಾಹಕರಿಗೆ ನೀಡಿದ ಪ್ರಚಾರ ಕೊಡುಗೆಗಳು, ಉತ್ತಮ ಚಂದಾದಾರರ ಮಿಶ್ರಣ ಮತ್ತು ಹೆಚ್ಚಿದ ಬಳಕೆಯಿಂದ ಬಂದ ಲಾಭವನ್ನು ಭಾಗಶಃ ಸರಿದೂಗಿಸಿದವು. ಪ್ರತಿ ಗ್ರಾಹಕರ ಮಾಸಿಕ ಡೇಟಾ ಬಳಕೆ ಶೇ 14.2ರಷ್ಟು ಹೆಚ್ಚಾಗಿ 44.2 GB ತಲುಪಿದರೆ, ಒಟ್ಟು ಡೇಟಾ ಸಂಚಾರ ಶೇ 22.1ರಷ್ಟು ಏರಿ, 71.3 ಬಿಲಿಯನ್ GB ಆಗಿದೆ. ಕಂಪನಿಯ ಗ್ರಾಹಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಶೇ 7.1ರಷ್ಟು ಬೆಳೆದು ಸೆಪ್ಟೆಂಬರ್ 2026ರ ವೇಳೆಗೆ 54.24 ಕೋಟಿ ತಲುಪಿದೆ. ಈ ತ್ರೈಮಾಸಿಕದಲ್ಲಿ ನಿವ್ವಳ ಸೇರ್ಪಡೆ 91 ಲಕ್ಷ ಆಗಿದ್ದು, ಹಿಂದಿನ ವರ್ಷ ಇದು 83 ಲಕ್ಷ ಆಗಿತ್ತು.
ಗ್ರಾಹಕರು ಸೇವೆ ತೊರೆಯುವ ಪ್ರಮಾಣ ಹಿಂದಿನ ವರ್ಷದ ಇದೇ ಅವಧಿಯ ಶೇ 1.9ರಿಂದ ಶೇ 1.6ಕ್ಕೆ ಇಳಿದಿದೆ. ಧ್ವನಿ ಸಂಚಾರ ವರ್ಷದಿಂದ ವರ್ಷಕ್ಕೆ ಶೇ 1.3ರಷ್ಟು ಹೆಚ್ಚಾಗಿ 1.52 ಲಕ್ಷ ಕೋಟಿ (ಟ್ರಿಲಿಯನ್) ನಿಮಿಷಗಳಷ್ಟಾಗಿದೆ.
ಜಿಯೋದ 5ಜಿ ಚಂದಾದಾರರ ಸಂಖ್ಯೆ ಸೆಪ್ಟೆಂಬರ್ನಲ್ಲಿ 30 ಕೋಟಿ ತಲುಪಿದ್ದು, ಕಳೆದ 12 ತಿಂಗಳಲ್ಲಿ 6.6 ಕೋಟಿ ಬಳಕೆದಾರರು ಸೇರ್ಪಡೆಯಾಗಿದ್ದಾರೆ. ಕಂಪನಿಯ ಒಟ್ಟು ವೈರ್ಲೆಸ್ ಸಂಚಾರದಲ್ಲಿ ಈ ತಂತ್ರಜ್ಞಾನದ ಪಾಲು ಸುಮಾರು ಶೇ 56 ಇದ್ದು, ಇದು 5ಜಿ ತಂತ್ರಜ್ಞಾನ ಹೆಚ್ಚುತ್ತಿರುವ ಅಳವಡಿಕೆ ಮತ್ತು ಬಳಕೆಯನ್ನು ಸೂಚಿಸುತ್ತದೆ.
ಫಿಕ್ಸ್ಡ್ ಬ್ರಾಡ್ಬ್ಯಾಂಡ್ ವಿಭಾಗದಲ್ಲಿ, ಸೆಪ್ಟೆಂಬರ್ ಅಂತ್ಯಕ್ಕೆ ಕಂಪನಿಯು 3 ಕೋಟಿ ಚಂದಾದಾರರನ್ನು ಹೊಂದಿತ್ತು; ಕಳೆದ ಒಂದು ವರ್ಷದಲ್ಲಿ 73 ಲಕ್ಷ ಹೆಚ್ಚಳವಾಗಿದೆ. ಏರ್ಫೈಬರ್ (AirFiber) ಚಂದಾದಾರರ ಸಂಖ್ಯೆ 1.51 ಕೋಟಿ ಆಗಿದ್ದು, ಈ ಅವಧಿಯಲ್ಲಿ ಜಿಯೋದ ಫಿಕ್ಸ್ಡ್ ಬ್ರಾಡ್ಬ್ಯಾಂಡ್ ಸೇರ್ಪಡೆಗಳ ಶೇ 75ಕ್ಕಿಂತ ಹೆಚ್ಚಿನ ಪಾಲು ಇದರದ್ದಾಗಿದೆ.
ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ, ನಿವ್ವಳ ಚಂದಾದಾರರ ಸೇರ್ಪಡೆ ಜೂನ್ ತ್ರೈಮಾಸಿಕದ 89 ಲಕ್ಷದಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 91 ಲಕ್ಷಕ್ಕೆ ಏರಿದೆ, ಮತ್ತು ಎಆರ್ ಪಿಯು ₹215.6ರಿಂದ ₹218.8ಕ್ಕೆ ಹೆಚ್ಚಿದೆ.





















