ಮುಂಬಯಿ: ಜಾಗತಿಕ ಇಂಧನ ಮಾರುಕಟ್ಟೆಯಲ್ಲಿನ ಏರಿಳಿತಗಳ ನಡುವೆಯೂ ರಿಲಯನ್ಸ್ ಇಂಡಸ್ಟ್ರೀಸ್ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದಾಖಲೆಯ ಸಾಧನೆ ಮಾಡಿದೆ. ಜಿಯೋ ಪ್ಲಾಟ್ಫಾರ್ಮ್ಸ್ನ ಹೆಚ್ಚಿದ ಆದಾಯ ಹಾಗೂ ತೈಲ-ರಾಸಾಯನಿಕ ಉದ್ಯಮದ ಸಾರ್ವಕಾಲಿಕ ಅತ್ಯುತ್ತಮ ಪ್ರದರ್ಶನವು ಕಂಪನಿಯ ಆರ್ಥಿಕ ಫಲಿತಾಂಶಕ್ಕೆ ಬಲ ನೀಡಿದೆ.
ರಿಲಯನ್ಸ್ನ ಸಂಯೋಜಿತ ನಿವ್ವಳ ಲಾಭವು ವಾರ್ಷಿಕ ಆಧಾರದ ಮೇಲೆ ಶೇ. 33.8 ರಷ್ಟು ಹೆಚ್ಚಳವಾಗಿ ₹29,550 ಕೋಟಿಗೆ ತಲುಪಿದ್ದು, ಇದು ಇದುವರೆಗಿನ ಗರಿಷ್ಠ ತ್ರೈಮಾಸಿಕ ಲಾಭವಾಗಿದೆ. ಕಂಪನಿಯ ಒಟ್ಟು ಆದಾಯ ಕೂಡ ಶೇ. 27.8 ರಷ್ಟು ಏರಿಕೆಯಾಗಿ ದಾಖಲೆಯ ₹3,62,268 ಕೋಟಿಗೆ ಏರಿಕೆಯಾಗಿದೆ.
ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ (ಮೊದಲ 6 ತಿಂಗಳಲ್ಲಿ) ರಿಲಯನ್ಸ್ನ ಒಟ್ಟು ನಿವ್ವಳ ಲಾಭವು ಇದೇ ಮೊದಲ ಬಾರಿಗೆ ₹50 ಸಾವಿರ ಕೋಟಿಯ ಗಡಿ ದಾಟಿದೆ.
ರಿಲಯನ್ಸ್ನ ಈ ಅಭೂತಪೂರ್ವ ಸಾಧನೆಯಲ್ಲಿ ಅದರ ತೈಲ- ರಾಸಾಯನಿಕ ಉದ್ಯಮವು ಪ್ರಮುಖ ಪಾತ್ರ ವಹಿಸಿದೆ. ಈ ವಿಭಾಗದ ಇಬಿಐಟಿಡಿಎ ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ. 67.9 ರಷ್ಟು ಹೆಚ್ಚಾಗಿ ದಾಖಲೆಯ ₹25,203 ಕೋಟಿಗೆ ತಲುಪಿದೆ. ಒ2ಸಿ ಉದ್ಯಮದ ಆದಾಯವೂ ಶೇ. 44.2 ರಷ್ಟು ಏರಿಕೆಯಾಗಿ ₹2,31,601 ಕೋಟಿಯಾಗಿದೆ. ಸಾರಿಗೆ ಇಂಧನದ ರಿಫೈನಿಂಗ್ ಮಾರ್ಜಿನ್ನಲ್ಲಾದ ತೀವ್ರ ಏರಿಕೆ ಹಾಗೂ ಪಾಲಿಯೆಸ್ಟರ್ ಉದ್ಯಮದ ಮಾರ್ಜಿನ್ ಮೂರು ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿರುವುದು ಈ ಸಾರ್ವಕಾಲಿಕ ಸಾಧನೆಗೆ ಮುಖ್ಯ ಕಾರಣಗಳಾಗಿವೆ.
ಈ ಅವಧಿಯಲ್ಲಿ ರಿಲಯನ್ಸ್ ಕಚ್ಚಾ ತೈಲ ಪೂರೈಕೆಗೆ ಸಂಬಂಧಿಸಿದ ಸವಾಲುಗಳನ್ನು ಕೂಡ ಸಮರ್ಥವಾಗಿ ಎದುರಿಸಿದೆ. ಸ್ಟ್ರೇಟ್ ಆಫ್ ಹೊರ್ಮುಜ್ನಲ್ಲಿನ ಅಡಚಣೆಗಳ ಹೊರತಾಗಿಯೂ, ಕಂಪನಿಯು ಲ್ಯಾಟಿನ್ ಅಮೆರಿಕ, ಉತ್ತರ ಅಮೆರಿಕ ಮತ್ತು ಮೆಡಿಟರೇನಿಯನ್ ಪ್ರದೇಶ ಸೇರಿದಂತೆ ವಿವಿಧ ಭಾಗಗಳಿಂದ ಕಚ್ಚಾ ತೈಲ ಪೂರೈಕೆಯನ್ನು ಖಚಿತಪಡಿಸಿಕೊಂಡು, ದಾಖಲೆ ಪ್ರಮಾಣದಲ್ಲಿ ಕಚ್ಚಾ ತೈಲ ಸಂಸ್ಕರಣೆ ಮಾಡಿದೆ. ಇದರಿಂದಾಗಿ ದೇಶೀಯ ಇಂಧನ ಬೇಡಿಕೆಯನ್ನು ಪೂರೈಸಲು ಸಾಧ್ಯವಾಯಿತು.
ರಿಲಯನ್ಸ್ನ ಇತರ ಉದ್ಯಮಗಳೂ ಸಹ ಕಂಪನಿಯ ಉತ್ತಮ ಪ್ರದರ್ಶನಕ್ಕೆ ಕೊಡುಗೆ ನೀಡಿವೆ. ಜಿಯೋ ಪ್ಲಾಟ್ಫಾರ್ಮ್ಸ್ನ ಆದಾಯ ಮತ್ತು ಲಾಭದಲ್ಲಿ ಗಮನಾರ್ಹ ಏರಿಕೆಯಾಗಿದ್ದರೆ, ರಿಲಯನ್ಸ್ ರಿಟೇಲ್ ಈ ತ್ರೈಮಾಸಿಕದಲ್ಲಿ 303 ಹೊಸ ಸ್ಟೋರ್ಗಳನ್ನು ಆರಂಭಿಸಿ, ಡಿಜಿಟಲ್ ಕಾಮರ್ಸ್ ವಿಸ್ತರಿಸಿದೆ. ಜಿಯೋಸ್ಟಾರ್ ಆದಾಯದಲ್ಲೂ ಬೆಳವಣಿಗೆ ದಾಖಲಾಗಿದೆ. ತೈಲ ಮತ್ತು ಅನಿಲ ವಿಭಾಗದ ಆದಾಯವು ಹೆಚ್ಚೂಕಡಿಮೆ ಸ್ಥಿರವಾಗಿದೆ. ಇನ್ನೊಂದೆಡೆ, ಕಂಪನಿಯು ತನ್ನ ನ್ಯೂ ಎನರ್ಜಿ (ಹೊಸ ಇಂಧನ) ಯೋಜನೆಗಳಲ್ಲಿ ಹೂಡಿಕೆಯನ್ನು ಮುಂದುವರಿಸಿದೆ.





















