
-ರಾಜರು, ಸಾಮ್ರಾಜ್ಯ, ಶಾಸನಗಳ ಮಾಹಿತಿ ಒಂದೇ ವೇದಿಕೆಯಲ್ಲಿ ಹೊಸ ಡಿಜಿಟಲ್ ಅಟ್ಲಾಸ್ ‘ಕರ್ನಾಟಕ ಐತಿಹಾಸಿಕ ಅಟ್ಲಾಸ್’
ಬೆಂಗಳೂರು: ಕರ್ನಾಟಕದ ಇತಿಹಾಸವನ್ನು ಕೇವಲ ಪಠ್ಯಪುಸ್ತಕಗಳಲ್ಲಿನ ದಿನಾಂಕಗಳು ಮತ್ತು ರಾಜವಂಶಗಳ ವಿವರಗಳಿಗೆ ಸೀಮಿತಗೊಳಿಸದೆ, ನಕ್ಷೆಗಳು, ಕಾಲರೇಖೆಗಳು ಮತ್ತು ಆಕರ ದಾಖಲೆಗಳ ಮೂಲಕ ಸುಲಭವಾಗಿ ಅರಿಯಲು ನೆರವಾಗುವ ಹೊಸ ಡಿಜಿಟಲ್ ಪ್ರಯತ್ನವೊಂದು ಗಮನ ಸೆಳೆಯುತ್ತಿದೆ. ಕನ್ನಡ ಭಾಷೆ ಮತ್ತು ತಂತ್ರಜ್ಞಾನವನ್ನು ಬೆಸೆಯುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ‘ಸಂಚಯ’ ರೂಪಿಸಿರುವ ‘ಕರ್ನಾಟಕ ಐತಿಹಾಸಿಕ ಅಟ್ಲಾಸ್’ ವಿದ್ಯಾರ್ಥಿಗಳು, ಶಿಕ್ಷಕರು, ಸಂಶೋಧಕರು ಹಾಗೂ ಇತಿಹಾಸಾಸಕ್ತರಿಗೆ ಉಪಯುಕ್ತವಾಗುವ ಮುಕ್ತ ಜ್ಞಾನ ವೇದಿಕೆಯಾಗಿ ರೂಪುಗೊಳ್ಳುತ್ತಿದೆ.
ಈ ಯೋಜನೆಯನ್ನು ಸಂಚಯದ ಓಂಶಿವಪ್ರಕಾಶ್ ಪರಿಚಯಿಸಿದ್ದು, ಕರ್ನಾಟಕದ ಸಾಮ್ರಾಜ್ಯಗಳು, ಅರಸರು, ಶಾಸನಗಳು, ಸ್ಮಾರಕಗಳು, ಸಾಹಿತ್ಯ, ಸ್ವಾತಂತ್ರ್ಯ ಚಳವಳಿ, ಜಿಲ್ಲಾ ಇತಿಹಾಸ, ಸಾಂಸ್ಕೃತಿಕ ಜೀವನ ಹಾಗೂ ಕರ್ನಾಟಕದ ಹೊರಜಗತ್ತಿನೊಂದಿಗಿನ ಐತಿಹಾಸಿಕ ಸಂಬಂಧಗಳನ್ನು ಒಂದೇ ವೇದಿಕೆಯಲ್ಲಿ ಅನ್ವೇಷಿಸುವ ಅವಕಾಶ ಕಲ್ಪಿಸುವುದು ಇದರ ಉದ್ದೇಶವಾಗಿದೆ.
ಏನಿದು ಕರ್ನಾಟಕ ಐತಿಹಾಸಿಕ ಅಟ್ಲಾಸ್? : ಸಾಮಾನ್ಯವಾಗಿ ಇತಿಹಾಸ ಕಲಿಯುವಾಗ ವಿದ್ಯಾರ್ಥಿಗಳು ರಾಜರ ಹೆಸರುಗಳು, ಯುದ್ಧಗಳು, ಆಡಳಿತಾವಧಿ ಮತ್ತು ಪ್ರಮುಖ ಘಟನೆಗಳ ದಿನಾಂಕಗಳನ್ನು ನೆನಪಿಟ್ಟುಕೊಳ್ಳುತ್ತಾರೆ. ಆದರೆ ಒಂದು ಘಟನೆ ಯಾವ ಪ್ರದೇಶದಲ್ಲಿ ನಡೆಯಿತು, ಆ ಕಾಲದಲ್ಲಿ ಯಾವ ರಾಜವಂಶ ಆಡಳಿತ ನಡೆಸುತ್ತಿತ್ತು, ಆ ಪ್ರದೇಶದ ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆ ಹೇಗಿತ್ತು ಎಂಬುದನ್ನು ಪರಸ್ಪರ ಸಂಬಂಧ ಕಲ್ಪಿಸಿಕೊಂಡು ಅರ್ಥಮಾಡಿಕೊಳ್ಳುವುದು ಅಷ್ಟೇ ಮುಖ್ಯ.
ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಸಂಚಯವು ಡಿಜಿಟಲ್ ನಕ್ಷೆಗಳು ಮತ್ತು ಕಾಲರೇಖೆಗಳನ್ನು ಆಧರಿಸಿದ ಐತಿಹಾಸಿಕ ಅಟ್ಲಾಸ್ ರೂಪಿಸಿದೆ. ಇಲ್ಲಿ ನಿರ್ದಿಷ್ಟ ವರ್ಷವನ್ನು ಆಯ್ಕೆ ಮಾಡಿಕೊಂಡು ಆ ಕಾಲದ ರಾಜರು, ಸಾಮ್ರಾಜ್ಯಗಳು, ಪ್ರಮುಖ ವ್ಯಕ್ತಿಗಳು, ಸಾಹಿತ್ಯ ಕೃತಿಗಳು, ಶಾಸನಗಳು, ಲಿಪಿಗಳ ಬೆಳವಣಿಗೆ ಮತ್ತು ಐತಿಹಾಸಿಕ ಘಟನೆಗಳ ಮಾಹಿತಿಯನ್ನು ಅನ್ವೇಷಿಸಬಹುದು.
ಯೋಜನೆಯ ವಿವರಣೆಯ ಪ್ರಕಾರ, ಕ್ರಿ.ಪೂ. 269ರಿಂದ 1973ರಲ್ಲಿ ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ಮರುನಾಮಕರಣವಾದ ಕಾಲಘಟ್ಟದವರೆಗಿನ ಇತಿಹಾಸವನ್ನು ಒಳಗೊಳ್ಳುವ ಉದ್ದೇಶ ಹೊಂದಿದೆ.
ಕನ್ನಡವೇ ಪ್ರಧಾನ ಭಾಷೆ – ಇಂಗ್ಲಿಷ್ ಬೆಂಬಲವೂ ಇದೆ : ಈ ಅಟ್ಲಾಸ್ನ ಪ್ರಮುಖ ವಿಶೇಷವೆಂದರೆ ಕನ್ನಡವನ್ನು ಪ್ರಧಾನ ಬಳಕೆದಾರ ಭಾಷೆಯಾಗಿ ರೂಪಿಸಿರುವುದು. ಇಂಗ್ಲಿಷ್ ಭಾಷೆಯಲ್ಲಿಯೂ ಮಾಹಿತಿ ವೀಕ್ಷಿಸುವ ಅವಕಾಶವಿದೆ. ಇದರಿಂದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಷ್ಟೇ ಅಲ್ಲದೆ, ಇಂಗ್ಲಿಷ್ ಮೂಲಕ ಕರ್ನಾಟಕದ ಇತಿಹಾಸ ತಿಳಿದುಕೊಳ್ಳಲು ಬಯಸುವವರಿಗೂ ಇದು ನೆರವಾಗಬಹುದು.
ಇನ್ನೊಂದು ವಿಶೇಷವೆಂದರೆ, ಲಭ್ಯವಿರುವ ದಾಖಲೆಗಳೊಂದಿಗೆ ಅವುಗಳ ಮೂಲ ಆಕರಗಳು ಮತ್ತು ಪರಿಶೀಲನೆಯ ಸ್ಥಿತಿಯನ್ನು ತೋರಿಸುವ ವ್ಯವಸ್ಥೆ. ಇದರಿಂದ ಓದುಗರು ಒಂದು ಮಾಹಿತಿಯನ್ನು ಕೇವಲ ಸ್ವೀಕರಿಸುವುದಕ್ಕಿಂತ ಅದರ ಮೂಲವನ್ನು ಪರಿಶೀಲಿಸುವ ಅಭ್ಯಾಸ ಬೆಳೆಸಿಕೊಳ್ಳಬಹುದು.
ಇತಿಹಾಸದ ವಿಚಾರದಲ್ಲಿ ವಿವಿಧ ಮೂಲಗಳ ಮಾಹಿತಿಯನ್ನು ಹೋಲಿಸುವುದು, ಶಾಸನಗಳು ಮತ್ತು ದಾಖಲೆಗಳ ಆಧಾರವನ್ನು ಅರಿಯುವುದು ಹಾಗೂ ದೃಢೀಕರಣವಿಲ್ಲದ ಮಾಹಿತಿಯನ್ನು ಎಚ್ಚರಿಕೆಯಿಂದ ನೋಡುವುದು ಮುಖ್ಯ. ಅಟ್ಲಾಸ್ನಲ್ಲಿ ಈ ರೀತಿಯ ಪುರಾವೆ ಆಧಾರಿತ ಅಧ್ಯಯನಕ್ಕೆ ಒತ್ತು ನೀಡಲಾಗಿದೆ.
ಶಾಲೆ ಮತ್ತು ಕಾಲೇಜುಗಳಿಗೆ ಹೇಗೆ ಉಪಯುಕ್ತ? : ಈ ಡಿಜಿಟಲ್ ವೇದಿಕೆಯನ್ನು ಇತಿಹಾಸ ಮತ್ತು ಸಮಾಜ ವಿಜ್ಞಾನ ಬೋಧನೆಗೆ ಪೂರಕ ಸಾಧನವಾಗಿ ಬಳಸಬಹುದು. ಶಿಕ್ಷಕರು ತರಗತಿಯಲ್ಲಿ ನಕ್ಷೆ ಮತ್ತು ಕಾಲರೇಖೆಗಳ ಮೂಲಕ ರಾಜವಂಶಗಳ ಆಡಳಿತ, ಐತಿಹಾಸಿಕ ಸ್ಥಳಗಳು ಮತ್ತು ಪ್ರಮುಖ ಘಟನೆಗಳನ್ನು ವಿವರಿಸಬಹುದು.
ವಿದ್ಯಾರ್ಥಿಗಳು ತಮ್ಮ ಜಿಲ್ಲೆ ಅಥವಾ ಊರಿನ ಇತಿಹಾಸ, ಪಾರಂಪರಿಕ ತಾಣಗಳು, ಶಾಸನಗಳು, ಸ್ಥಳೀಯ ಸಾಹಿತಿಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಕುರಿತು ಯೋಜನಾ ಕಾರ್ಯಗಳನ್ನು ಕೈಗೊಳ್ಳಬಹುದು. ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಇತಿಹಾಸ ಪ್ರದರ್ಶನ, ರಸಪ್ರಶ್ನೆ, ಪಾರಂಪರಿಕ ನಡಿಗೆ ಮತ್ತು ಸ್ಥಳೀಯ ಇತಿಹಾಸ ಪರಿಚಯ ಕಾರ್ಯಕ್ರಮಗಳಿಗೂ ಬಳಸಿಕೊಳ್ಳಬಹುದು.
ಹಿರಿಯ ವಿದ್ಯಾರ್ಥಿಗಳು ಮತ್ತು ಸಂಶೋಧಕರು ದಾಖಲೆಗಳ ಮೂಲವನ್ನು ಪರಿಶೀಲಿಸುವುದು, ವಿಭಿನ್ನ ಆಕರಗಳನ್ನು ಹೋಲಿಸುವುದು ಹಾಗೂ ಸಂಶೋಧನಾ ಮಾಹಿತಿಯನ್ನು ವ್ಯವಸ್ಥಿತವಾಗಿ ದಾಖಲಿಸುವುದಕ್ಕೆ ಇದನ್ನು ಪೂರಕವಾಗಿ ಬಳಸಬಹುದು.
ಮುಕ್ತ ತಂತ್ರಾಂಶ, ಮುಕ್ತ ಮಾಹಿತಿ, ಮುಕ್ತ ಜ್ಞಾನ : ‘ಸಂಚಯ’ದ ಮೂಲ ಉದ್ದೇಶವೇ ಕನ್ನಡ ಮತ್ತು ತಂತ್ರಜ್ಞಾನವನ್ನು ಒಟ್ಟುಗೂಡಿಸಿ ಭಾಷೆ, ಸಾಹಿತ್ಯ ಮತ್ತು ಸಂಶೋಧನೆಗೆ ತಂತ್ರಜ್ಞಾನದ ನೆರವು ಒದಗಿಸುವುದಾಗಿದೆ. ವಚನ ಸಂಚಯದಂತಹ ಡಿಜಿಟಲ್ ಪರಿಕರಗಳ ಮೂಲಕ ಕನ್ನಡ ಸಾಹಿತ್ಯವನ್ನು ಹೆಚ್ಚಿನ ಜನರಿಗೆ ತಲುಪಿಸುವ ಪ್ರಯತ್ನವನ್ನು ಸಂಸ್ಥೆ ಈ ಹಿಂದಿನಿಂದಲೂ ಮಾಡುತ್ತಿದೆ.
ಕರ್ನಾಟಕ ಐತಿಹಾಸಿಕ ಅಟ್ಲಾಸ್ ಕೂಡ ಮುಕ್ತ ತಂತ್ರಾಂಶ, ಮುಕ್ತ ದತ್ತಾಂಶ ಮತ್ತು ಮುಕ್ತ ಜ್ಞಾನ ಎಂಬ ಆಶಯಗಳನ್ನು ಆಧಾರವಾಗಿಟ್ಟುಕೊಂಡಿದೆ. ಶಿಕ್ಷಕರು, ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಸಾರ್ವಜನಿಕರು ಪರಿಶೀಲಿಸಬಹುದಾದ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಯೋಜನೆಯ ಬೆಳವಣಿಗೆಗೆ ಕೊಡುಗೆ ನೀಡಬಹುದು ಎಂಬುದು ಇದರ ಆಶಯ.
ಸಂಚಯದ ಸ್ಥಾಪಕ ಓಂಶಿವಪ್ರಕಾಶ್ ಅವರ ಪ್ರಕಾರ, 2010ರಲ್ಲಿಯೇ ‘ಶಾಸನ ಸಂಚಯ’ ಹೆಸರಿನಲ್ಲಿ ಇಂತಹ ವ್ಯವಸ್ಥೆಯನ್ನು ರೂಪಿಸುವ ಪ್ರಯತ್ನ ನಡೆದಿತ್ತು. ಆಗ ನಕ್ಷೆ ಆಧಾರಿತ ತಂತ್ರಜ್ಞಾನದ ಕೆಲವು ಮಿತಿಗಳಿದ್ದವು. ನಂತರ ತಮ್ಮ ಮಗಳು ಶಾಲೆಯಲ್ಲಿ ಸಮಾಜ ವಿಜ್ಞಾನ ಕಲಿಯಲು ಆರಂಭಿಸಿದ ಸಂದರ್ಭದಲ್ಲಿ ರಾಜರು, ಸಾಮ್ರಾಜ್ಯಗಳು ಮತ್ತು ಭೌಗೋಳಿಕತೆಯನ್ನು ನಕ್ಷೆಗಳ ಮೂಲಕ ವಿವರಿಸುವ ಆಲೋಚನೆ ಮತ್ತೆ ಮೂಡಿ, ಕರ್ನಾಟಕ ಐತಿಹಾಸಿಕ ಅಟ್ಲಾಸ್ ರೂಪುಗೊಂಡಿತು. ಇವರ ‘Servants of Knowledge’ ಸಂಸ್ಠೆ, ಪುಸ್ತಕಗಳು ಮತ್ತು ಹಸ್ತಪ್ರತಿಗಳನ್ನು ಡಿಜಿಟಲೀಕರಣಗೊಳಿಸಿ ಸಾರ್ವಜನಿಕರಿಗೆ ಲಭ್ಯವಾಗಿಸುವ ಕೆಲಸವನ್ನೂ ಮಾಡುತ್ತಿದೆ. ಡಿಜಿಟಲೀಕರಣಗೊಂಡ ಪುಸ್ತಕಗಳ ಮಾಹಿತಿಯನ್ನು ಇಲ್ಲಿ ಉಲ್ಲೇಖಗಳನ್ನಾಗಿ ಬಳಸಿದ್ದು, ವಿಷಯದ ಮೂಲದ ಸಂಶೋಧನೆ ಮಾಡುವುದನ್ನು ಪ್ರಾಯೋಗಿಕವಾಗಿ ಈ ಮೂಲಕ ಕಲಿಸುವ ಪ್ರಯತ್ನ ಮಾಡಲಾಗುತ್ತಿದೆ.
ಸಾರ್ವಜನಿಕರಿಗೂ ಕೊಡುಗೆ ನೀಡಲು ಅವಕಾಶ : ಈ ಯೋಜನೆ ಕೇವಲ ಸಿದ್ಧ ಮಾಹಿತಿಯನ್ನು ಓದುವ ವೇದಿಕೆಯಾಗಿ ಉಳಿಯಬಾರದು ಎಂಬುದು ಸಂಚಯದ ಆಶಯ. ಇತಿಹಾಸಾಸಕ್ತರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಂಶೋಧಕರು ತಮ್ಮ ಬಳಿ ಇರುವ ದಾಖಲೆಗಳು, ಪುಸ್ತಕಗಳ ಉಲ್ಲೇಖಗಳು, ಶಾಸನಗಳ ಮಾಹಿತಿ ಹಾಗೂ ಸ್ಥಳೀಯ ಇತಿಹಾಸಕ್ಕೆ ಸಂಬಂಧಿಸಿದ ಆಕರಗಳನ್ನು ಹಂಚಿಕೊಳ್ಳಬಹುದು.
ಆದರೆ ಐತಿಹಾಸಿಕ ಮಾಹಿತಿಯ ವಿಶ್ವಾಸಾರ್ಹತೆಯನ್ನು ಕಾಪಾಡಲು ಕೊಡುಗೆಗಳನ್ನು ಪರಿಶೀಲನಾ ಪ್ರಕ್ರಿಯೆಯ ಮೂಲಕವೇ ಸ್ವೀಕರಿಸುವ ಉದ್ದೇಶ ಹೊಂದಲಾಗಿದೆ. ಹೀಗಾಗಿ ಸಾರ್ವಜನಿಕ ಸಹಭಾಗಿತ್ವದ ಜೊತೆಗೆ ಮಾಹಿತಿಯ ಗುಣಮಟ್ಟಕ್ಕೂ ಆದ್ಯತೆ ನೀಡಲಾಗಿದೆ.
ಕರ್ನಾಟಕದ ಇತಿಹಾಸವನ್ನು ಡಿಜಿಟಲ್ ರೂಪದಲ್ಲಿ ದಾಖಲಿಸುವ ಈ ಪ್ರಯತ್ನವು ಮುಂದಿನ ದಿನಗಳಲ್ಲಿ ಇನ್ನಷ್ಟು ಸಮೃದ್ಧವಾಗಬೇಕಾದರೆ ಸ್ಥಳೀಯ ಇತಿಹಾಸ ಸಂಶೋಧಕರು, ವಿಶ್ವವಿದ್ಯಾಲಯಗಳು, ಗ್ರಂಥಾಲಯಗಳು, ಶಾಲೆಗಳು ಮತ್ತು ಸಾರ್ವಜನಿಕರ ಸಹಕಾರ ಮಹತ್ವದ್ದಾಗಿದೆ.
ಕರ್ನಾಟಕ ಐತಿಹಾಸಿಕ ಅಟ್ಲಾಸ್ ವೀಕ್ಷಿಸಲು ಅಧಿಕೃತ ವೆಬ್ಸೈಟ್ : ಒಟ್ಟಿನಲ್ಲಿ, ಕರ್ನಾಟಕದ ಇತಿಹಾಸವನ್ನು ಕೇವಲ ಓದುವ ವಿಷಯವನ್ನಾಗಿಸದೆ, ನಕ್ಷೆಯಲ್ಲಿ ಹುಡುಕುವ, ಕಾಲರೇಖೆಯಲ್ಲಿ ಅರ್ಥಮಾಡಿಕೊಳ್ಳುವ ಮತ್ತು ಮೂಲ ದಾಖಲೆಗಳ ಮೂಲಕ ಪರಿಶೀಲಿಸುವ ಅನುಭವ ನೀಡುವುದು ಈ ಯೋಜನೆಯ ವಿಶೇಷತೆ. ಸ್ಥಳೀಯ ಇತಿಹಾಸದ ಬಗ್ಗೆ ಹೊಸ ಪೀಳಿಗೆಯಲ್ಲಿ ಕುತೂಹಲ ಮೂಡಿಸುವುದರ ಜೊತೆಗೆ ಕನ್ನಡದಲ್ಲಿ ಡಿಜಿಟಲ್ ಜ್ಞಾನ ಸಂಪನ್ಮೂಲಗಳ ಬೆಳವಣಿಗೆಗೂ ಇದು ನೆರವಾಗುವ ನಿರೀಕ್ಷೆಯಿದೆ. ಕರ್ನಾಟಕ ಐತಿಹಾಸಿಕ ಅಟ್ಲಾಸ್
- ಅಗರಬತ್ತಿ ಮಾರಾಟದ ಬದುಕಿನಲ್ಲೂ ಆರದ ಗೀಗೀಪದದ ನಾದ: ದಾವಲಸಾಬ ಅತ್ತಾರರಿಗೆ ರಾಜ್ಯೋತ್ಸವ ಪ್ರಶಸ್ತಿ
- ‘ಬಿಗ್ ಬಾಸ್ ಕನ್ನಡ 13’: ಈ ವಾರ ಪ್ರಶಾಂತ್ಗೆ ‘ಕಿಚ್ಚನ ಚಪ್ಪಾಳೆ’ ಸಿಗಲಿ ಎಂದ ವೀಕ್ಷಕರು!
- ಕರುನಾಡ ಇತಿಹಾಸಕ್ಕೆ ಡಿಜಿಟಲ್ ಸ್ಪರ್ಶ! ‘ಕರ್ನಾಟಕ ಐತಿಹಾಸಿಕ ಅಟ್ಲಾಸ್’ – ಕರ್ನಾಟ ಸಂಚಯ
- ಟ್ರಾಯ್ ವರದಿಯಲ್ಲಿ ಜಿಯೋ ದರ್ಬಾರ್: ಗ್ರಾಹಕರ ಸೆಳೆಯುವಲ್ಲಿ ನಂ.1
- ‘ಸೀತೆ ಪಾತ್ರಕ್ಕೆ ಈಕೆ ನಾಲಾಯಕ್’: ‘ರಾಮಾಯಣ’ ಬಿಡುಗಡೆ ಹೊಸ್ತಿಲಲ್ಲಿ ಸಾಯಿ ಪಲ್ಲವಿ ವಿರುದ್ಧ ಕೆಂಡಕಾರಿದ್ದೇಕೆ ನೆಟ್ಟಿಗರು?



















