SK Home Ad
Home ನಮ್ಮ ಜಿಲ್ಲೆ ಬೆಂಗಳೂರು ಸೌಜನ್ಯ ಕೇಸ್‌ ತನಿಖೆಗೆ ಹೊಸ ತಿರುವು: ಮುಖ್ಯಸ್ಥ ಸ್ಥಾನದಿಂದ ಕೈಬಿಡುವಂತೆ ಶಶಿಕುಮಾರ್ ಮನವಿ

ಸೌಜನ್ಯ ಕೇಸ್‌ ತನಿಖೆಗೆ ಹೊಸ ತಿರುವು: ಮುಖ್ಯಸ್ಥ ಸ್ಥಾನದಿಂದ ಕೈಬಿಡುವಂತೆ ಶಶಿಕುಮಾರ್ ಮನವಿ

0
74

ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯ ಹೊಣೆ ಹೊತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಖ್ಯಸ್ಥ ಐಜಿಪಿ ಶಶಿಕುಮಾರ್ ಅವರು ತಮ್ಮನ್ನು ಈ ಜವಾಬ್ದಾರಿಯಿಂದ ಮುಕ್ತಗೊಳಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ-ಐಜಿಪಿ) ಎಂ.ಎ. ಸಲೀಂ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಸೌಜನ್ಯ ಪ್ರಕರಣದ ತನಿಖೆಯ ನೇತೃತ್ವ ವಹಿಸಿರುವ ಶಶಿಕುಮಾರ್ ಅವರ ನೇಮಕಕ್ಕೆ ಸೌಜನ್ಯ ಪರ ಹೋರಾಟಗಾರರು ಹಾಗೂ ಕುಟುಂಬಸ್ಥರಿಂದ ಆಕ್ಷೇಪ ವ್ಯಕ್ತವಾಗಿತ್ತು. ಈ ಬೆಳವಣಿಗೆಗಳ ನಡುವೆಯೇ ಅವರು ತನಿಖಾ ಹೊಣೆಗಾರಿಕೆಯಿಂದ ಹಿಂದೆ ಸರಿಯುವಂತೆ ಮನವಿ ಮಾಡಿರುವುದು ಗಮನ ಸೆಳೆದಿದೆ.

ನೇಮಕದ ಬಗ್ಗೆ ವ್ಯಕ್ತವಾಗಿತ್ತು ಆಕ್ಷೇಪ: ಶಶಿಕುಮಾರ್ ಅವರು ಈ ಹಿಂದೆ ಮಂಗಳೂರು ಪೊಲೀಸ್ ಕಮಿಷನರ್ ಆಗಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿ ಧರ್ಮಸ್ಥಳದೊಂದಿಗೆ ಅವರಿಗೆ ಇದ್ದ ಸಂಪರ್ಕದ ಹಿನ್ನೆಲೆಯಲ್ಲಿ, ಸೌಜನ್ಯ ಪರ ಹೋರಾಟಗಾರರು ಎಸ್‌ಐಟಿ ಮುಖ್ಯಸ್ಥರಾಗಿ ಅವರ ನೇಮಕದ ಬಗ್ಗೆ ಪ್ರಶ್ನೆ ಎತ್ತಿದ್ದರು.

ಪ್ರಕರಣದ ತನಿಖೆಯಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು ಎಂದು ಒತ್ತಾಯಿಸುತ್ತಿರುವ ಹೋರಾಟಗಾರರು, ಶಶಿಕುಮಾರ್ ಅವರ ನೇತೃತ್ವದಲ್ಲಿ ನ್ಯಾಯ ದೊರೆಯುವ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಅವರ ಕಾರ್ಯವೈಖರಿಯ ಬಗ್ಗೆಯೂ ಆಕ್ಷೇಪಿಸಿದ್ದರು.

ತನಿಖೆಯ ಪಾರದರ್ಶಕತೆ ಹಿನ್ನೆಲೆಯಲ್ಲಿ ನಿರ್ಧಾರ?: ತಮ್ಮ ನೇಮಕದ ಕುರಿತು ವ್ಯಕ್ತವಾಗಿರುವ ಆಕ್ಷೇಪಗಳು ಪ್ರಕರಣದ ತನಿಖೆಯ ಪಾರದರ್ಶಕತೆಯ ಬಗ್ಗೆ ಮತ್ತಷ್ಟು ಚರ್ಚೆಗೆ ಕಾರಣವಾಗಬಾರದು ಎಂಬ ಹಿನ್ನೆಲೆಯಲ್ಲಿ ಶಶಿಕುಮಾರ್ ಅವರು ಈ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಅನುಮಾನಗಳಿಗೆ ಅವಕಾಶವಾಗಬಾರದು ಎಂಬ ಉದ್ದೇಶದಿಂದ ಅವರು ಸ್ವಯಂಪ್ರೇರಿತವಾಗಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಆದರೆ, ಶಶಿಕುಮಾರ್ ಅವರ ಮನವಿಗೆ ಡಿಜಿ-ಐಜಿಪಿ ಎಂ.ಎ. ಸಲೀಂ ಅವರು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಎಸ್‌ಐಟಿ ಮುಖ್ಯಸ್ಥರ ಜವಾಬ್ದಾರಿಯಲ್ಲಿ ಬದಲಾವಣೆಯಾಗಲಿದೆಯೇ ಎಂಬುದರ ಕುರಿತು ಅಧಿಕೃತ ಸ್ಪಷ್ಟನೆ ಹೊರಬಿದ್ದಿಲ್ಲ.