SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ಆಶ್ರಯ ನಿವೇಶನ ದಾಖಲೆ ವಂಚನೆ ಆರೋಪ: ಕಸಾಪ ಜಿಲ್ಲಾಧ್ಯಕ್ಷ ದಂಪತಿ ವಿರುದ್ಧ ಎಫ್‌ಐಆರ್

ಆಶ್ರಯ ನಿವೇಶನ ದಾಖಲೆ ವಂಚನೆ ಆರೋಪ: ಕಸಾಪ ಜಿಲ್ಲಾಧ್ಯಕ್ಷ ದಂಪತಿ ವಿರುದ್ಧ ಎಫ್‌ಐಆರ್

0
384

ದಾಂಡೇಲಿ (ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬೊಮ್ಮಯ್ಯ ನಾರಾಯಣ ನಾಯಕ ಅಲಿಯಾಸ್ ಬಿ.ಎನ್. ವಾಸರೆ ಹಾಗೂ ಅವರ ಪತ್ನಿ ಜಲಜಾಕ್ಷಿ ಅವರ ವಿರುದ್ಧ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೋಯಿಡಾ ತಾಲೂಕಿನ ಕೊಂಡಪಾ ಗ್ರಾಮದ ವೆಂಕಟೇಶ ಅಲಿಯಾಸ್ ಸ್ವಾಮಿ ಸುಬ್ಬಯ್ಯ ಭೂಪಾಲಿ ಅವರು ನೀಡಿದ ದೂರಿನ ಆಧಾರದ ಮೇಲೆ, ಪ್ರಕರಣ ಸಂಖ್ಯೆ 154/2026ರ ಅಡಿಯಲ್ಲಿ ಐಪಿಸಿ ಕಲಂ 420, 465, 468, 471 ಹಾಗೂ 34ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆಶ್ರಯ ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳ ವಿಚಾರದಲ್ಲಿ ವಂಚನೆ ಹಾಗೂ ನಕಲಿ ದಾಖಲೆಗಳ ಬಳಕೆಯ ಆರೋಪವನ್ನು ದೂರಿನಲ್ಲಿ ಮಾಡಲಾಗಿದೆ.

ದೂರಿನ ಪ್ರಕಾರ, ದಾಂಡೇಲಿ ನಗರದ ಟೌನ್‌ಶಿಪ್ ಪ್ರದೇಶದ ನಗರಸಭೆಯ ಸಿ.ಟಿ.ಎಸ್. ನಂಬರ್ 3122ರಲ್ಲಿರುವ ಆಶ್ರಯ ನಿವೇಶನವು ದೂರುದಾರ ವೆಂಕಟೇಶ ಅವರ ಹೆಸರಿನಲ್ಲಿತ್ತು. ಈ ನಿವೇಶನಕ್ಕಾಗಿ ಅವರ ಹೆಸರಿನಲ್ಲಿ ಅರ್ಜಿ ಸಲ್ಲಿಸಿ 10 ಸಾವಿರ ರೂಪಾಯಿ ಪಾವತಿಸಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನಿವೇಶನವು ವೆಂಕಟೇಶ ಅವರ ಹೆಸರಿಗೆ ನೋಂದಣಿಯಾದ ನಾಲ್ಕು ದಿನಗಳಲ್ಲೇ, ಆರ್ಥಿಕ ಅಡಚಣೆಯ ಕಾರಣಕ್ಕೆ 1,95,000 ರೂಪಾಯಿಗೆ ಮಾರಾಟ ಮಾಡಿರುವುದಾಗಿ ಕ್ರಯಪತ್ರದಲ್ಲಿ ನಮೂದಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮುಂದೆ, ಬಿ.ಎನ್. ವಾಸರೆ ಹಾಗೂ ಅವರ ಪತ್ನಿ ಜಲಜಾಕ್ಷಿ ಅವರು ನಿವೇಶನ ಖರೀದಿಸುವುದಾಗಿ ಹೇಳಿ, ಸಾಕ್ಷಿಯಾಗಿ ಸಹಿ ಮಾಡಬೇಕೆಂದು ವೆಂಕಟೇಶ ಅವರನ್ನು ಹಳಿಯಾಳದ ಉಪನೋಂದಣಾಧಿಕಾರಿ ಕಚೇರಿಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಅವರಿಂದ ಸಹಿ ಪಡೆದು, ನಿವೇಶನವನ್ನು ಜಲಜಾಕ್ಷಿ ಅವರ ಹೆಸರಿಗೆ ನೋಂದಾಯಿಸಿಕೊಳ್ಳಲಾಗಿದೆ ಎಂಬುದು ದೂರುದಾರರ ಆರೋಪವಾಗಿದೆ.

ಸರ್ಕಾರದಿಂದ ಮಂಜೂರಾದ ಆಶ್ರಯ ನಿವೇಶನಕ್ಕೆ ಸಂಬಂಧಿಸಿದಂತೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ಸರ್ಕಾರಿ ಭೂಮಿಯನ್ನು ಖಾಸಗಿ ಆಸ್ತಿಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರರು ಪೋಲಿಸರಿಗೆ ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪರಿಶೀಲನೆ: ಕಳೆದ ಒಂದು ವರ್ಷದಿಂದ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ದಾಂಡೇಲಿ ಪೋಲಿಸ್ ವೃತ್ತ ನಿರೀಕ್ಷಕರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿದ್ದರು. ಈ ಸಂದರ್ಭದ ವಿಚಾರಣೆಯಲ್ಲಿ ನಗರಸಭೆ ಪೌರಾಯುಕ್ತ ನಿವೇಶನ ಅಕ್ರಮದ ಕುರಿತು ಸಮಗ್ರ ವರದಿ ನೀಡಿದ್ದರು.

ದಾಖಲಾತಿ ಲಭ್ಯವಿದ್ದಲ್ಲಿ ಪೊಲೀಸ್‌ ಠಾಣೆಗೆ ಹಾಜರಾಗಿ ದೂರು ನೀಡುವಂತೆ ವೆಂಕಟೇಶ ಸುಬ್ಬಯ್ಯ ಅವರಿಗೆ ಪೊಲೀಸ್ ವೃತ್ತ ನಿರೀಕ್ಷಕರು ಹಿಂಬರಹ ನೀಡಿದ್ದರು. ಪ್ರಸ್ತುತ ದಾಂಡೇಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿ.ಎಸ್.ಐ ಮಹೇಶ ಮೆಲಗೇರಿ ತನಿಖಾಧಿಕಾರಿಯಾಗಿದ್ದಾರೆ.