SK Home Ad
Home ಕ್ರೀಡೆ ಕೊಹ್ಲಿ, ಧೋನಿ, ರೋಹಿತ್ ಮುಂದೆ ಪಾಕ್ ಸ್ಟಾರ್ಸ್‌ಗೆ ಬೆಲೆಯಿಲ್ಲ; ಇಂಡೋ-ಪಾಕ್ ಡ್ರೀಮ್ ಟೀಮ್‌ ಆರಿಸಿ ಅಚ್ಚರಿ...

ಕೊಹ್ಲಿ, ಧೋನಿ, ರೋಹಿತ್ ಮುಂದೆ ಪಾಕ್ ಸ್ಟಾರ್ಸ್‌ಗೆ ಬೆಲೆಯಿಲ್ಲ; ಇಂಡೋ-ಪಾಕ್ ಡ್ರೀಮ್ ಟೀಮ್‌ ಆರಿಸಿ ಅಚ್ಚರಿ ಮೂಡಿಸಿದ ವಕಾರ್ ಯೂನಿಸ್!

0
27

ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ವೇಗಿಗಳಲ್ಲಿ ಒಬ್ಬರಾದ ಪಾಕಿಸ್ತಾನದ ಮಾಜಿ ದಿಗ್ಗಜ ವಕಾರ್ ಯೂನಿಸ್, ಭಾರತ ಮತ್ತು ಪಾಕಿಸ್ತಾನ ಆಟಗಾರರ ಸಂಯೋಜಿತ ‘ಡ್ರೀಮ್ ಇಲೆವೆನ್’ ಆಯ್ಕೆ ಮಾಡುವ ವೇಳೆ ತಮ್ಮದೇ ದೇಶದ ಸ್ಟಾರ್ ಆಟಗಾರರನ್ನು ಕಡೆಗಣಿಸಿ ಭಾರತೀಯರಿಗೆ ಮಣೆ ಹಾಕುವ ಮೂಲಕ ಭಾರೀ ಸಂಚಲನ ಮೂಡಿಸಿದ್ದಾರೆ.

87 ಟೆಸ್ಟ್‌ಗಳಿಂದ 373 ವಿಕೆಟ್ ಹಾಗೂ 262 ಏಕದಿನಗಳಿಂದ 416 ವಿಕೆಟ್ ಕಬಳಿಸಿರುವ 54 ವರ್ಷದ ವಕಾರ್, ಶುಭಾಂಕರ್ ಮಿಶ್ರಾ ಅವರ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದಾಗ ನಡೆಸಿದ ರ್ಯಾಪಿಡ್ ಫೈರ್ ಸುತ್ತಿನಲ್ಲಿ ಈ ಅಚ್ಚರಿಯ ಆಯ್ಕೆಗಳನ್ನು ಮಾಡಿದ್ದಾರೆ.

ತಮ್ಮ ಆಯ್ಕೆಯ ಬಹುತೇಕ ಮುಖಾಮುಖಿಗಳಲ್ಲಿ ವಕಾರ್ ಯೂನಿಸ್ ಭಾರತೀಯ ದಿಗ್ಗಜರನ್ನೇ ಬೆಂಬಲಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಮತ್ತು ಇಂಜಮಾಮ್-ಉಲ್-ಹಕ್ ನಡುವೆ ಸಚಿನ್ ಅವರನ್ನು ಆಯ್ಕೆ ಮಾಡಿದರೆ, ವಿರಾಟ್ ಕೊಹ್ಲಿ ಮತ್ತು ಬಾಬರ್ ಆಜಂ ನಡುವೆ ನಿರ್ದಾಕ್ಷಿಣ್ಯವಾಗಿ ಕೊಹ್ಲಿ ಪರ ನಿಂತಿದ್ದಾರೆ.

ಜಸ್‌ಪ್ರೀತ್ ಬುಮ್ರಾ ಮತ್ತು ಶಾಹೀನ್ ಅಫ್ರಿದಿ ನಡುವೆ ಬುಮ್ರಾ ಅವರನ್ನು, ರಾಹುಲ್ ದ್ರಾವಿಡ್ ಮತ್ತು ಯೂನಿಸ್ ಖಾನ್ ನಡುವೆ ದ್ರಾವಿಡ್ ಅವರನ್ನು ಆರಿಸಿದ್ದಾರೆ. ಎಂ.ಎಸ್. ಧೋನಿ ಮತ್ತು ಜಾವೇದ್ ಮಿಯಾಂದಾದ್ ನಡುವೆ ಧೋನಿಯನ್ನು, ರೋಹಿತ್ ಶರ್ಮಾ ಮತ್ತು ಫಖರ್ ಜಮಾನ್ ನಡುವೆ ರೋಹಿತ್ ಅವರನ್ನು ಆಯ್ಕೆ ಮಾಡಿದ್ದಾರೆ.

ವಿವಿಎಸ್ ಲಕ್ಷ್ಮಣ್ ಮತ್ತು ಮಿಸ್ಬಾ-ಉಲ್-ಹಕ್ ನಡುವೆ ಲಕ್ಷ್ಮಣ್ ಅವರನ್ನು ಹಾಗೂ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಆಮಿರ್ ನಡುವೆ ಶಮಿ ಅವರನ್ನೇ ಶ್ರೇಷ್ಠ ಎಂದಿದ್ದಾರೆ. ಇಡೀ ಪಟ್ಟಿಯಲ್ಲಿ ಅವರು ಆರಿಸಿದ ಏಕೈಕ ಪಾಕಿಸ್ತಾನಿ ಆಟಗಾರ ಎಂದರೆ ವೀರೇಂದ್ರ ಸೆಹ್ವಾಗ್ ಎದುರು ಶಾಹಿದ್ ಅನ್ವರ್ ಮಾತ್ರ.

15 ವರ್ಷದ ವೈಭವ್ ಸೂರ್ಯವಂಶಿ ಮತ್ತು ಸಮೀರ್ ಮಿನ್ಹಾಸ್ ನಡುವೆ ಇಬ್ಬರ ಆಟವನ್ನು ಹೆಚ್ಚಾಗಿ ನೋಡಿಲ್ಲವೆಂದು ಆಯ್ಕೆಯಿಂದ ದೂರ ಉಳಿದರು. ಪಾಕಿಸ್ತಾನದ ಮಾಜಿ ನಾಯಕನೊಬ್ಬ ಭಾರತೀಯ ಆಟಗಾರರ ಪ್ರಾಬಲ್ಯವನ್ನು ಬಹಿರಂಗವಾಗಿ ಒಪ್ಪಿಕೊಂಡಿರುವುದು ಉಭಯ ದೇಶಗಳ ಕ್ರಿಕೆಟ್ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.